-->
Malli Vasantha Kumar | ಮೈಸೂರು ವಿವಿ ಮಾಜಿ ಪ್ರಾಧ್ಯಾಪಕ, ಸಂಶೋಧಕ ಪ್ರೊ. ಮಳಲಿ ವಸಂತಕುಮಾರ್ ಗೆ ಭೌತಿಕ ವಿದಾಯ...

Malli Vasantha Kumar | ಮೈಸೂರು ವಿವಿ ಮಾಜಿ ಪ್ರಾಧ್ಯಾಪಕ, ಸಂಶೋಧಕ ಪ್ರೊ. ಮಳಲಿ ವಸಂತಕುಮಾರ್ ಗೆ ಭೌತಿಕ ವಿದಾಯ... |ಅರಕಲಗೂಡು ಜಯಕುಮಾರ್

ಕವಿ, ಸಾಹಿತಿ, ವಿಮರ್ಶಕ, ನಾಟಕ ರಚನೆಕಾರ, ಕನ್ನಡ ಚಳುವಳಿ ಹೋರಾಟಗಾರ, ಶಿಕ್ಷಣ ತಜ್ಞ, ಮೈಸೂರು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರು,‌ಮೈಸೂರು ವಿವಿ ಮಾಜಿ ಪ್ರಾಧ್ಯಾಪಕ, ಸಂಶೋಧಕ ಪ್ರೊ. ಮಳಲಿ ವಸಂತಕುಮಾರ್

 


ಅದು ಡಿ.22, 2015ರ ಸಂಜೆ. ಅಂದಿನ ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದ ಡಾ ಎಚ್ ಎಲ್ ಜನಾರ್ಧನ್ ಸರ್ (ಈಗ ಬಳ್ಳಾರಿ ಜಿಲ್ಲೆಯ DHO) , ಸಿ ಕೆ ಹರೀಶ್, ಮಧು, ಶಂಕರ್ ಮತ್ತು ಮಿತ್ರರು ಪ್ರೊ ಹಿ ಷಿ ರಾಮಚಂದ್ರಗೌಡರ ಮನೆಯಲ್ಲಿದ್ದೆವು. ಅವರನ್ನು ಮಾತನಾಡಿಸಿ ಹೊರಡುವಾಗ ತಡವಾಗಿತ್ತು. ಕೇಂದ್ರ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಜನಾರ್ಧನ್ ಸರ್ ಸ್ಪರ್ಧಿಯಾಗಿದ್ದರಿಂದ ಬೆಂಬಲ ಕೋರಿ ಹೋಗಿದ್ದೆವು.


ಇನ್ನು ಪ್ರೊಫೆಸರ್ ಮಳಲಿ ವಸಂತಕುಮಾರ್ ಅವರನ್ನು ಮಾತನಾಡಿಸಿ ಆಶೀರ್ವಾದ ಪಡೆದು ಬರೋಣ ಎಂದು ಜನಾರ್ದನ್ ಸರ್ ಎಲ್ಲರನ್ನೂ ಹೊರಡಿಸಿದರು. ಸಣ್ಣದಾಗಿ ಮಳೆ ಬೇರೆ.. ಹೆಚ್ ಡಿ ಕೋಟೆ ರಸ್ತೆಯ ಪಕ್ಕದ ಕಳಲವಾಡಿಯ ಭೂಮಿತಾಯಿ ಫಾರ್ಮ್ ಹೌಸ್ ತಲುಪಿದಾಗ ರಾತ್ರಿ 8 ಗಂಟೆ.

ಟಾರ್ಚ್ ಹಿಡಿದು ಗೇಟಿನಲ್ಲಿ ನಿಂತು ಬರಮಾಡಿ ಕೊಂಡರು ಪ್ರೊಫೆಸರ್. ಮೈಸೂರು ಮಹರಾಜ ಕಾಲೇಜಿನಲ್ಲಿ ನಾನು ಅವರ ಶಿಷ್ಯನಾಗಿದ್ದೆ. ಥಿಯೇಟರ್ ನಂತಿರುವ ಬಿಎ ಹಾಲ್ ನಲ್ಲಿ ಆರ್ಟ್ಸ್-ಕಾಮರ್ಸ್ ವಿದ್ಯಾರ್ಥಿಗಳಿಗೆ ಜಂಟಿಯಾಗಿ ತರಗತಿಗಳು ನಡೆಯುತ್ತಿದ್ದವು. ನಾನು ಕಾಮರ್ಸ್ ವಿದ್ಯಾರ್ಥಿ.


ಆ ದಿನಗಳಲ್ಲಿ ಮಳಲಿ ಸರ್ ಅವರ ಕೃತಿಯೇ ಕನ್ನಡ ಪಾಠದ ಭಾಗವಾಗಿತ್ತು. ಅವರ ಕೃತಿಯನ್ನು ಅವರಿಂದಲೇ ಪಾಠವಾಗಿ ಕೇಳುವ ಭಾಗ್ಯ ನಮ್ಮದು. ಥರಾವರಿ ಕೀಟಲೆ ಹುಡುಗ/ಹುಡುಗಿಯರಿಂದ ತುಂಬಿರುತ್ತಿದ್ದ ಹಾಲ್ ನಲ್ಲಿ ತಮಾಷೆಯಾಗಿ ಮಾತಾಡುತ್ತ, ವಿದ್ಯಾರ್ಥಿಗಳ ಕಾಲೆಳೆಯುತ್ತಾ ಪಾಠದೆಡೆಗೆ ಸೆಳೆದು ಕೊಳ್ಳುವ ಪರಿ ಇವತ್ತಿಗೂ ಸ್ಮರಣೀಯ.


ಹಾಸನ ‌ಜಿಲ್ಲೆಯ ಮಳಲಿ ಗ್ರಾಮದವರಾದರೂ ಪ್ರೊಫೆಸರ್ ಅವರ ಕರ್ಮಭೂಮಿ ಮೈಸೂರು ಜಿಲ್ಲೆ. ಮೈಸೂರು ವಿವಿಯಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದರು. ಮಂಡ್ಯ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರೂ ಆಗಿದ್ದರು. ಕವಿತೆ, ವಿಮರ್ಶೆ, ಕಾದಂಬರಿ, ಕಥೆ, ಸಂಶೋಧನಾ ಕೃತಿ, ಸಂಪಾದಿತ ಕೃತಿಗಳು ಮತ್ತು ನಾಟಕಗಳನ್ನು ಅವರು‌ ರಚಿಸಿದ್ದಾರೆ. ಕನಕದಾಸರ ಕುರಿತ ಸಂಶೋಧನಾ ಗ್ರಂಥ ಮಹತ್ವದ್ದು. ಕುವೆಂಪು ಸಾಹಿತ್ಯದ ಕುರಿತ ಮಹಾ ಪ್ರಬಂಧ ಪ್ರಮುಖವಾದುದು.ಕುವೆಂಪು ಅವರ ಸಹವರ್ತಿಯಾಗಿದ್ದ ಮಳಲಿ ಅವರು ಅನೇಕ ಮೌಲ್ಯಯುತವಾದ ಕೃತಿಗಳನ್ನು ನೀಡಿದ್ದಾರೆ. ಪಕ್ಕಾ ಜನಪದ ಶೈಲಿಯ ಬರಹ ವಿಶಿಷ್ಠವಾದುದು. ಗೋಕಾಕ್ ಚಳುವಳಿ, ಕನ್ನಡ ಕ್ರಿಯಾ ಸಮಿತಿಯಲ್ಲಿ ಭಾಗಿಯಾಗಿದ್ದ ಅವರು ಮೈಸೂರು ಜಿಲ್ಲೆಯ ಕಸಾಪ ಅಧ್ಯಕ್ಷರೂ ಆಗಿ ಗುರುತರವಾದ ಕೆಲಸವನ್ನು ಮಾಡಿದ್ದಾರೆ.


ವೃತ್ತಿ ಜೀವನದ ಕೊನೆಯ ದಿನಗಳ ನೋವು ಅವರನ್ನು ಬಹುಕಾಲ ಕಾಡಿತ್ತು. ನಾವು ಅವರನ್ನು ಭೇಟಿಯಾದ ಸಂದರ್ಭದಲ್ಲಿಯೂ ಬಳಲಿದಂತೆ ಕಂಡರು. ನಮ್ಮನ್ನೆಲ್ಲ ಉಪಚರಿಸಿ , ಸಲಹೆಗಳನ್ನು ನೀಡಿದರು. ಶ್ರವಣ ಬೆಳಗೊಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊರತಂದ *ಬೆಟ್ಟದ ಬೆಳಕು* ಸ್ಮರಣ ಸಂಚಿಕೆಯನ್ನು ಜನಾರ್ಧನ್ ಸರ್ ಪ್ರೊಫೆಸರ್ ಗೆ ನೀಡಿದರು.


ಅಷ್ಟೊತ್ತಿಗೆ ತುಂತುರು ಮಳೆ ಬೀಳಲು ಆರಂಭವಾಗಿತ್ತು. ಮತ್ತೆ ಟಾರ್ಚ್ ಹಿಡಿದು ಗೇಟಿನವರೆಗೆ ಬಂದು ಬೀಳ್ಕೊಟ್ಟರು ಪ್ರೊಫೆಸರ್. ಆ ದೃಶ್ಯ ಇನ್ನೂ ಕಣ್ಣ ಮುಂದಿದೆ. ಅವರ ಕೃತಿ, ಕೆಲಸಗಳ ಮೂಲಕ ಅವರು ಸದಾಕಾಲ ವರ್ತಮಾನದ ಬೆಳಕಾಗಿಯೇ ಇರುತ್ತಾರೆ. ಭೌತಿಕ ಅಗಲಿಕೆಯಷ್ಟೆ ಆಗಿದೆ. ಭೌತಿಕ ಜೀವನಕ್ಕೆ ವಿದಾಯ ಹೇಳಿದ ಪ್ರೊಫೆಸರ್ ಆತ್ಮಕ್ಕೆ ಶಾಂತಿ‌ ಸಿಗಲಿ.‌

Ads on article

Advertise in articles 1

advertising articles 2

Advertise under the article

holige copy 1.jpg