police atrocity against CFI students? | ವಿದ್ಯಾರ್ಥಿಗಳ ಮೇಲೆ ಪೊಲೀಸರ ಹಲ್ಲೆ ಆರೋಪ: ಸಿಎಫ್‌ಐ ಪ್ರತಿಭಟನೆ




ಗಾಂಜಾ ದಂಧೆಗೆ ಸೇರಿದ್ದಾರೆ ಎನ್ನಲಾದ ಯುವಕರ ಗುಂಪೊಂದು ಸಿಎಫ್‌ಐ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದು, ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಉಳ್ಳಾಲ ಪೊಲೀಸರೂ ಸಂತ್ರಸ್ತ ವಿದ್ಯಾರ್ಥಿಗಳನ್ನೇ ಬಂಧಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಅವರನ್ನು ಠಾಣೆಗೆ ಕರೆದೊಯ್ದು, ಮಾರಣಾಂತಿಕ ಹಲ್ಲೆ ನಡೆಸಿದ ಧಾರ್ಮಿಕ ನಿಂದನೆ ನಡೆಸಿದ್ದಾರೆ ಹಾಗೂ ಮರ್ಮಾಂಗಕ್ಕೆ ತಮ್ಮ ಬೂಟುಗಳಿಂದ ಒದ್ದು ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತ ಸಿಎಫ್‌ಐ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಈ ಘಟನೆಯನ್ನು ಖಂಡಿಸಿ ಸಿಎಫ್‌ಐ ಮಂಗಳೂರು ಜಿಲ್ಲಾ ಸಮಿತಿಯ ವತಿಯಿಂದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆಯನ್ನೂ ನಡೆಸಲಾಯಿತು.


ಜಿಲ್ಲೆಯಲ್ಲಿ ಗಾಂಜಾ ಮಾಫಿಯಾ ಸಕ್ರಿಯವಾಗಿದೆ ಮತ್ತು ಪ್ರಬಲವಾಗಿ ಬೇರೂರಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ನ್ಯಾಯ ಒದಗಿಸಬೇಕಾದ ಪೊಲೀಸರು ಗಾಂಜಾ ಮಾಫಿಯಾದೊಂದಿಗೆ ಕೈಜೋಡಿಸಿರುವ ಶಂಕೆ ಬಲವಾಗಿದೆ ಎದ್ದಿದೆ. ಅಲ್ಲದೆ, ಆಂತರಿಕವಾಗಿ ಇವರ ಜೊತೆ ಶಾಮೀಲಾಗಿದ್ದಾರೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡುವಂತಾಗಿದೆ.


ಗಾಂಜಾ ಮಾಫಿಯಾದಿಂದಾಗಿ ಶಾಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಡ್ರಾಪೌಟ್ ಸಂಖ್ಯೆ ಹೆಚ್ಚಿದೆ. ಇದರ ಬಗ್ಗೆ ಜನಜಾಗೃತಿ ಮೂಡಿಸಲು ಸಿಎಫ್‌ಐ ಅಭಿಯಾನ ಆರಂಭಿಸಿತ್ತು. ಈ ಅಭಿಯಾನದ ಭಾಗವಾಗಿ ನಡೆದ ಉಳ್ಳಾಲದ ಕಾರ್ಯಕ್ರಮದ ಸಂದರ್ಭದಲ್ಲಿ ಕಿಡಿಗೇಡಿಗಳು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.


ಉಳ್ಳಾಲ ಠಾಣೆಯಲ್ಲಿ ಸಂತ್ರಸ್ತ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಿಎಫ್‌ಐ ಒತ್ತಾಯಿಸಿದೆ. ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳು ಮಧ್ಯಪ್ರವೇಶ ಮಾಡಬೇಕು ಮತ್ತು ಆರೋಪಿ ಪೊಲೀಸರ ಮೇಲೆ ತಕ್ಷಣ ಕ್ರಮ ಜರುಗಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.