ಗ್ರಾಹಕ ನ್ಯಾಯಾಲಯಕ್ಕೆ ದೂರು: ಹಾಳಾದ ಟಿವಿ ಬದಲು ಹೊಸ ಟಿವಿ ನೀಡಿದ ಪೆನಸಾನಿಕ್
ಮಂಗಳೂರಿನ ಪ್ರತಿಷ್ಠಿತ ಪತ್ರಿಕೆಯೊಂದರ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಹಕರೊಬ್ಬರು ಕಳೆದ ವರ್ಷ ಹೊಚ್ಚ ಹೊಸ ಪೆನಸಾನಿಕ್ ಟಿವಿಯೊಂದನ್ನು ನಗರದ ಸಿಟಿ ಸೆಂಟರ್ ಮಾಲ್‌ನಲ್ಲಿ ಇರುವ ರಿಲಯನ್ಸ್ ಡಿಜಿಟಲ್ ಮಳಿಗೆಯಲ್ಲಿ ಖರೀದಿಸಿದರು. 39 ಸಾವಿರ ಬೆಲೆಯುಳ್ಳ ಈ ಪೆನಸಾನಿಕ್ ಟಿವಿ 10 ತಿಂಗಳಲ್ಲಿ ಕೆಟ್ಟು ಹೋಯಿತು.
ಈ ಬಗ್ಗೆ ಅವರು ರಿಲಯನ್ಸ್ ಡಿಜಿಟಲ್‌ಗೆ ದೂರು ಸಲ್ಲಿಸಿದರು. ಇದನ್ನು ಸಂಬಂಧಪಟ್ಟ ಸೇವಾ ಕೇಂದ್ರಕ್ಕೆ ರಿಲಯನ್ಸ್ ಮಳಿಗೆಯವರು ಕಳುಹಿಸಿದ್ದರು. ಆದರೆ, ನಾಲ್ಕು ದಿನದಲ್ಲಿ ಟಿವಿಯನ್ನು ರಿಪೇರಿ ಮಾಡಿಕೊಡುವುದಾಗಿ ಹೇಳಿದ್ದ ಸೇವಾ ಕೇಂದ್ರ ವಾರವಾದರೂ ಈ ಬಗ್ಗೆ ಸ್ಪಂದನೆ ಮಾಡಿರಲಿಲ್ಲ.
ಸಾಕಷ್ಟು ಇಮೇಲ್, ದೂರವಾಣಿ ಕರೆ ಬಳಿಕ ಅವರು ಪೆನಸಾನಿಕ್, ರಿಲಯನ್ಸ್ ಡಿಜಿಟಲ್‌ಗೆ ಲೀಗಲ್ ನೋಟೀಸ್ ಜಾರಿಗೊಳಿಸಿದರು.
ಜೊತೆಗೆ ಗ್ರಾಹಕ ಕೇಂದ್ರಕ್ಕೆ ದೂರು ಸಲ್ಲಿಸಿದರು. ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಪೆನಸಾನಿಕ್ ಕಂಪೆನಿ ಹೊಸ ಟಿವಿಯೊಂದನ್ನು ನೀಡಿ ಪ್ರಕರಣಕ್ಕೆ ಸುಖಾಂತ್ಯ ಹಾಡಿತು.
