ಮಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಹೇರಲಾದ ಲಾಕ್‌ಡೌನ್ ಪರಿಣಾಮವಾಗಿ ಉದ್ಯಮದಿಂದ ನಷ್ಟ ಅನುಭವಿಸಿದ ಉದ್ಯಮಿಯೊಬ್ಬರು ತನ್ನ ಸ್ವಂತ ಮಗನನ್ನು ಹತ್ಯೆ ಮಾಡಿ ಪತ್ನಿ ಸಮೇತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ನಡೆದಿರುವುದು ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್ ಬಳಿ ನಡೆದಿದೆ.
ಮೃತ ದಂಪತಿಯನ್ನು ವಿನೋದ್ ಸಾಲಿಯಾನ್ (೪೦) ಮತ್ತು ರಚನಾ ಸಾಲಿಯಾನ್ ಮತ್ತು ಅವರ ಎಂಟು ವರ್ಷದ ಪುತ್ರ ಸಾಧ್ಯ ಸಾಲಿಯಾನ್ ಎಂದು ಗುರುತಿಸಲಾಗಿದೆ.
ಮೂಲತಃ ಹಳೆಯಂಗಡಿಯ ನಿವಾಸಿಯಾಗಿರುವ ವಿನೋದ್ ಸಾಲಿಯಾನ್ ಕುಟುಂಬ ಕಳೆದ ಹಲವಾರು ವರ್ಷಗಳಿಂದ ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಯಶಸ್ವಿಯಾಗಿ ಹೊಟೇಲ್ ಉದ್ಯಮ ಮಾಡಿಕೊಂಡಿದ್ದರು. ಒಂದು ವರ್ಷದ ಹಿಂದೆ ಊರಿಗೆ ಮರಳಿದ್ದ ವಿನೋದ್ ಸಾಲಿಯಾನ್ ಹಳೆಯಂಗಡಿ ಕಲ್ಲಾಪು ರೈಲ್ವೇ ಗೇಟ್ ಬಳಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಜೀವನೋಪಾಯಕ್ಕೆ ರೀಯಲ್ ಎಸ್ಟೇಟ್ ವ್ಯವಹಾರವನ್ನು ನಡೆಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಶನಿವಾರ ಎಂದಿನಂತೆ ಇದ್ದ ದಂಪತಿಗಳು ಭಾನುವಾರ ಈ ಕೃತ್ಯ ನಡೆಸಿರಬಹುದು ಎಂದು ಅಂದಾಜಿಸಲಾಗಿದೆ. ಭಾನುವಾರ ದಿನಪೂರ್ತಿ ಮನೆಯ ಬಾಗಿಲು ತೆರೆಯದ ಕಾರಣ ಅಕ್ಕಪಕ್ಕದ ಮನೆಯವರು ಮನೆಯ ಕಿಟಕಿ ತೆರೆದು ನೋಡಿದಾಗ ಈ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಆರ್ಥಿಕ ಸಂಕಷ್ಟವೇ ಈ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗಿದೆ. ಸ್ಥಳೀಯರ ಮಾಹಿತಿ ಆಧಾರದಲ್ಲಿ ಮೂಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ವಿವರ ಇನ್ನಷ್ಟೇ ತಿಳಿದುಬರಬೇಕಿದೆ.