ನವದೆಹಲಿ: ಇಲ್ಲಿನ 80 ವರ್ಷದ ನಿವೃತ್ತ ಪೋಸ್ಟ್ ಮಾಸ್ಟರ್ ಪಂಜಾಬ್ ರಾಜ್ಯ ಡಿಯರ್ ಬೈಸಾಖಿ ಬಂಪರ್ ಲಾಟರಿಯಲ್ಲಿ 6 ಕೋಟಿ ರೂ. ಪ್ರಥಮ ಬಹುಮಾನವನ್ನು ಗೆದ್ದಿದ್ದಾರೆ.
ದೆಹಲಿಯ ನಿವಾಸಿ 80 ವರ್ಷದ ಓಂ ಪ್ರಕಾಶ್ ಅವರು ಲುಧಿಯಾನದ ಘಂಟಾ ಘರ್‌ನಲ್ಲಿರುವ ಅಂಗಡಿಯಿಂದ 500 ರೂ. ಲಾಟರಿ ಟಿಕೆಟ್ ಖರೀದಿಸಿದ್ದರು. ಅವರು ಬಿ 520729 ಸಂಖ್ಯೆಯ ಲಾಟರಿ ಟಿಕೆಟ್ ಖರೀದಿಸಿದ್ದರು. ಎಪ್ರಿಲ್ 19ರಂದು ಘೋಷಿಸಲಾದ ಡ್ರಾದಲ್ಲಿ ಅವರು ಖರೀದಿಸಿದ್ದ ಲಾಟರಿ ಟಿಕೆಟ್‌ಗೆ ಮೊದಲ ಬಹುಮಾನ ಬಂದಿದೆ. ಆದ್ದರಿಂದ, ರಾತ್ರಿ ಬೆಳಗಾಗುವಷ್ಟರಲ್ಲಿ ಅವರು ಕೋಟ್ಯಧಿಪತಿಯಾಗಿದ್ದಾರೆ.
ಓಂ ಪ್ರಕಾಶ್ ಸುಮಾರು 30 ವರ್ಷಗಳಿಂದ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದರು. ಆಗಾಗ ಸಂಬಂಧಿಕರ ಸಹಕಾರದಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದರು. ಅವರು ತಮ್ಮ ಅತ್ತಿಗೆಯನ್ನು ಭೇಟಿ ಮಾಡಲು ಆಗಾಗ ಲುಧಿಯಾನಕ್ಕೆ ಹೋಗಿದ್ದ ಸಂದರ್ಭದಲ್ಲಿ ಟಿಕೆಟ್‌ಗಳನ್ನು ಖರೀದಿಸಿದ್ದರು.
ಲಾಟರಿ ಫಲಿತಾಂಶಗಳು ಘೋಷಣೆಯಾದ ಬಳಿಕ, ಓಂ ಪ್ರಕಾಶ್ ಲುಧಿಯಾನಕ್ಕೆ ಪ್ರಯಾಣ ಬೆಳೆಸಿದರು. ಅಲ್ಲಿ ಅವರನ್ನು ಸಂಭ್ರಮಾಚರಣೆಗಳೊಂದಿಗೆ ಸ್ವಾಗತಿಸಲಾಯಿತು. ಈ ಹಣವನ್ನು ದತ್ತಿ ಉದ್ದೇಶಗಳಿಗಾಗಿ ಬಳಸಲು ಅವರ ಕುಟುಂಬ ಯೋಜಿಸಿದೆ. ಲುಧಿಯಾನ ಪ್ರದೇಶದ ನಿರ್ಗತಿಕರಿಗೆ ಮತ್ತು ಅನಾಥಾಶ್ರಮಗಳಲ್ಲಿ ಅಗತ್ಯವಿರುವವರಿಗೆ ಸಹಾಯ ಮಾಡುವುದಾಗಿ ಓಂ ಪ್ರಕಾಶ್ ತಿಳಿಸಿದ್ದಾರೆ.