ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಕಾರ್ಕಳ ಬಳಿ ರಸ್ತೆ ಅಪಘಾತ: ಮಾಜಿ ಸಚಿವ ರಮಾನಾಥ್ ರೈಗೆ ಗಾಯ, ಪಿಎ ಕಾಲು ಮುರಿತ

ಕಾರ್ಕಳ (ಉಡುಪಿ):ಮಾಜಿ ಸಚಿವ ಬಿ. ರಮಾನಾಥ್ ರೈ ಅವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಕಾರ್ಕಳ-ಮೂಡುಬಿದಿರೆ ರಸ್ತೆಯ ಸಾಣೂರು ಗ್ರಾಮದ ಬಳಿ ರವಿವಾರ ಮಧ್ಯಾಹ್ನ ನಡೆದಿದೆ.

ಅಪಘಾತದ ತೀವ್ರತೆಗೆ ರಮಾನಾಥ್ ರೈ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರ ಆಪ್ತ ಸಹಾಯಕ (ಪಿಎ) ಡೆನ್ಜೆಲ್ ಅವರ ಬಲಗಾಲು ಮುರಿದಿದೆ.

ಘಟನೆಯ ವಿವರ:
ರವಿವಾರ ಮಧ್ಯಾಹ್ನ ಸುಮಾರು 3:30ರ ವೇಳೆಗೆ ರಮಾನಾಥ್ ರೈ ಅವರು ತಮ್ಮ ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಸಾಣೂರು ವ್ಯಾಪ್ತಿಯಲ್ಲಿ 'ವಿಶಾಲ್' ಸಂಸ್ಥೆಗೆ ಸೇರಿದ ಖಾಸಗಿ ಬಸ್ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿದೆ.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪಿಎ ಡೆನ್ಜೆಲ್ ಅವರನ್ನು ತಕ್ಷಣವೇ ಸ್ಥಳೀಯ ಟಿಎಂಎ ಪೈ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಯೆನಪೋಯಾ ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮಾಜಿ ಸಚಿವ ರಮಾನಾಥ್ ರೈ ಅವರಿಗೂ ಸ್ಥಳೀಯ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಕೊಡಿಸಲಾಗಿದೆ.

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದು, ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.