ಬಂಟ್ವಾಳದಲ್ಲಿ ಬೇಲಿಯೆ ಎದ್ದು ಹೊಲ ಮೇಯಿತು: ತನ್ನದೆ ಬ್ಯಾಂಕ್ ನಿಂದ 70 ಲಕ್ಷ ರೂ ಲಪಟಾಯಿಸಿದ ಮ್ಯಾನೇಜರ್


ಮಂಗಳೂರು: ಬಂಟ್ವಾಳ ತಾಲೂಕಿನ ಪೆರ್ನೆ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಶಾಖೆಯ ಜಂಟಿ ವ್ಯವಸ್ಥಾಪಕ ಬ್ಯಾಂಕ್ ಶಾಖೆಯಿಂದ 70.86 ಲಕ್ಷ ರೂ. ಲಪಟಾಯಿಸಿದ್ದಲ್ಲದೆ, ಸೇಫ್ ಲಾಕರಿನಿಂದ 4.40 ಗ್ರಾಂ ಚಿನ್ನವನ್ನು ಎಗರಿಸಿ ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


04-09-2023 ರಿಂದ 19-12-2025ರವರೆಗೆ ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ವ್ಯವಸ್ಥಾಪಕನಾಗಿದ್ದ ಆಂಧ್ರ ಮೂಲದ ಸುಬ್ರಹ್ಮಣ್ಯಂ(30) ಎಂಬಾತನೇ ಆರೋಪಿ. ಈತ ಎಟಿಎಂ ಮೇಲ್ವಿಚಾರಣೆಯ ಜವಾಬ್ದಾರಿಯನ್ನೂ ಹೊಂದಿದ್ದರು.


ಸುಬ್ರಹ್ಮಣ್ಯಂ 06-02-2024 ರಿಂದ 16-12-2025 ರ ವರೆಗೆ ಎಟಿಎಂಗೆ ನಿಗದಿತ ನಗದು ಜಮಾ ಮಾಡದೇ ಕಡಿಮೆ ಹಣ ಜಮಾ ಮಾಡಿ 70,86,000ರೂ. ಹಣವನ್ನು ದುರುಪಯೋಗ ಪಡಿಸಿದ್ದಾನೆ. ಅಲ್ಲದೆ 19-12-2025 ರಂದು ಸೇಫ್ ಲಾಕ‌ರ್ ಪರಿಶೀಲನೆ ವೇಳೆ 55,000ರೂ. ಮೌಲ್ಯದ 4.400 ಗ್ರಾಂ ಚಿನ್ನ ವಂಚಿಸಿರುವುದು ಬೆಳಕಿಗೆ ಬಂದಿದೆ. ಹಣದ ದುರುಪಯೋಗ ಮೇಲಧಿಕಾರಿಗಳಿಗೆ ತಿಳಿಯುತ್ತಿದ್ದಂತೆ 17-12-2025 ರಂದು ಯಾರಿಗೂ ತಿಳಿಸದೇ ಪರಾರಿಯಾಗಿದ್ದಾನೆ. ಈತ ಒಟ್ಟು 71,41,000ರೂ. ವಂಚಿಸಿದ್ದಾನೆಂದು ಬ್ಯಾಂಕ್ ಆಫ್ ಬರೋಡಾ ಜೆಪ್ಪು ಶಾಖೆಯ ಪ್ರಾದೇಶಿಕ ವ್ಯವಸ್ಥಾಪಕರು ದೂರು ನೀಡಿದ್ದಾರೆ.


ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 121/2025 ಕಲಂ 314, 316(5), 318(2) BNS-2023 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿದೆ.