ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಮದುವೆಯಾದ ಕೆಲವೇ ನಿಮಿಷಗಳಲ್ಲಿ ಹೆಲಿಕಾಪ್ಟರ್ ದುರಂತ: ಭಾರತೀಯ ಮೂಲದ ಪೈಲಟ್ ಸಾವು; ಮದುವೆ ಸಭಾಂಗಣ, ಹೆಲಿಕಾಪ್ಟರ್ ಸಂಸ್ಥೆ ವಿರುದ್ಧ ನವವಧು ಕೇಸ್! Helicopter Crash Minutes After Wedding: Surviving Bride Sues Venue and Chopper Operator Over Death of Indian-Origin Pilot Husband




ಜಾರ್ಜಿಯಾ (ಅಮೆರಿಕ):

ಮದುವೆ ಸಂಭ್ರಮ ಮುಗಿಸಿ ಹೊರಟ ಕೆಲವೇ ನಿಮಿಷಗಳಲ್ಲಿ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ ಭಾರತೀಯ ಮೂಲದ ಪೈಲಟ್ ದುರ್ಮರಣಕ್ಕೀಡಾದ ನಾಲ್ಕು ತಿಂಗಳ ಬಳಿಕ, ದುರಂತದಲ್ಲಿ ಗಂಭೀರ ಗಾಯಗೊಂಡು ಬದುಕುಳಿದಿದ್ದ ಆತನ ನವವಧು ಜೆಸ್ನಿ ಸ್ಯಾಮ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಪ್ರತಿಕೂಲ ಹವಾಮಾನದ ನಡುವೆಯೂ ನಿರ್ಲಕ್ಷ್ಯ ವಹಿಸಿ ಹಾರಾಟ ನಡೆಸಿದ್ದೇ ದುರಂತಕ್ಕೆ ಕಾರಣ ಎಂದು ಆರೋಪಿಸಿರುವ ಆಕೆ, ಮದುವೆ ಸಭಾಂಗಣ ಹಾಗೂ ಹೆಲಿಕಾಪ್ಟರ್ ಸಂಸ್ಥೆಯ ವಿರುದ್ಧ 'ಅಕ್ರಮ ಸಾವು' (Wrongful death) ದಾವೆ ಹೂಡಿದ್ದಾರೆ.

ಡೆಲ್ಟಾ ಏರ್‌ಲೈನ್ಸ್ ಪೈಲಟ್ ಆಗಿದ್ದ ಭಾರತೀಯ ಮೂಲದ ಡೇವ್ ಫಿಜಿ (Dave Fiji) ದುರಂತದಲ್ಲಿ ಮೃತಪಟ್ಟ ವರ. ಹೆಲಿಕಾಪ್ಟರ್ ಅನ್ನು ಚಲಾಯಿಸುತ್ತಿದ್ದ ಪೈಲಟ್ ನಿಖಿಲ್ ನರ್ಗುಂಡ್ಕರ್ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದರು.

ಸಂಭ್ರಮದ ಕ್ಷಣದಲ್ಲೇ ಎರಗಿದ ದುರಂತ:

ಅಮೆರಿಕದ ಜಾರ್ಜಿಯಾದ ಡಾಸನ್‌ವಿಲ್ಲೆಯಲ್ಲಿರುವ 'ದಿ ರಿವೆರೆ' ಎಂಬ ವೆಡ್ಡಿಂಗ್ ಮತ್ತು ಇವೆಂಟ್ಸ್ ಸಭಾಂಗಣದಲ್ಲಿ ಜೆಸ್ನಿ ಸ್ಯಾಮ್ ಮತ್ತು ಡೇವ್ ಫಿಜಿ ಅವರ ವಿವಾಹ ಅದ್ಧೂರಿಯಾಗಿ ನೆರವೇರಿತ್ತು. ರಾತ್ರಿ ಸುಮಾರು 9:30 ರ ಸುಮಾರಿಗೆ ಆರತಕ್ಷತೆ ಮುಗಿದ ನಂತರ, ದಂಪತಿ ಅಟ್ಲಾಂಟಾದ ಹೋಟೆಲ್‌ಗೆ ತೆರಳಲು ಯೋಜಿಸಿದ್ದರು. ಇದಕ್ಕಾಗಿ ಸಭಾಂಗಣದ ವತಿಯಿಂದ ಪ್ರೆಸ್ಟೀಜ್ ಹೆಲಿಕಾಪ್ಟರ್ಸ್ (Prestige Helicopters) ಸಂಸ್ಥೆಯ 'ರಾಬಿನ್ಸನ್ R66' ಹೆಲಿಕಾಪ್ಟರ್ ಅನ್ನು ಬಾಡಿಗೆಗೆ ಪಡೆಯಲಾಗಿತ್ತು.

ಹೆಲಿಕಾಪ್ಟರ್ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ, ದಟ್ಟ ಮರಗಳಿಗೆ ಡಿಕ್ಕಿ ಹೊಡೆದು ಅರಣ್ಯ ಪ್ರದೇಶದಲ್ಲಿ ಅಪ್ಪಳಿಸಿ ನಜ್ಜುಗುಜ್ಜಾಗಿದೆ.

ಪತಿಯ ಶವದಡಿಯಲ್ಲೇ 6 ಗಂಟೆ ಸಿಲುಕಿದ್ದ ನವವಧು:

ಅಪಘಾತದ ಭೀಕರತೆಗೆ ಹೆಲಿಕಾಪ್ಟರ್‌ನ ಅವಶೇಷಗಳ ನಡುವೆ ಜೆಸ್ನಿ ಗಂಭೀರ ಗಾಯಗೊಂಡು ಸಿಲುಕಿಕೊಂಡಿದ್ದರು. ಮೃತ ಪತಿಯ ಮೃತದೇಹ ಆಕೆಯ ಮೇಲೆಯೇ ಬಿದ್ದ ಸ್ಥಿತಿಯಲ್ಲಿ, ಆಕೆ ಸತತ ಸುಮಾರು 6 ಗಂಟೆಗಳ ಕಾಲ ನರಳಾಡಿದ್ದಾರೆ. ಅಂತಿಮವಾಗಿ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಮೇ 30ರ ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಆಕೆಯನ್ನು ಅವಶೇಷಗಳಿಂದ ಹೊರತೆಗೆದಿದ್ದವು.

ಹಾರಾಟ ಬೇಡವೆಂದರೂ ನಿರ್ಲಕ್ಷ್ಯ – ನ್ಯಾಯಾಲಯಕ್ಕೆ ಅರ್ಜಿ:

ತೀವ್ರ ಹವಾಮಾನ ವೈಪರೀತ್ಯ ಮತ್ತು ಮಳೆಯ ನಡುವೆಯೂ ಹೆಲಿಕಾಪ್ಟರ್ ಹಾರಿಸದಂತೆ ಸ್ವತಃ ಅನುಭವಿ ಪೈಲಟ್ ಆಗಿದ್ದ ಪತಿ ಡೇವ್ ಫಿಜಿ ಎಚ್ಚರಿಸಿದ್ದರು. ಆರಂಭದಲ್ಲಿ ಹಾರಾಟ ರದ್ದುಗೊಳಿಸಲು ನಿರ್ಧರಿಸಲಾಗಿತ್ತಾದರೂ, ಹೆಲಿಕಾಪ್ಟರ್ ಪೈಲಟ್ ಮಳೆಯಲ್ಲೂ ಸುರಕ್ಷಿತವಾಗಿ ಕೊಂಡೊಯ್ಯುವುದಾಗಿ ಅತಿಯಾದ ಆತ್ಮವಿಶ್ವಾಸ ತೋರಿದ್ದನು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಹವಾಮಾನ ವೈಪರೀತ್ಯವನ್ನು ಸರಿಯಾಗಿ ಅವಲೋಕಿಸದೆ, ಭದ್ರತಾ ನಿಯಮಗಳನ್ನು ಗಾಳಿಗೆ ತೂರಿ ಹಾರಾಟ ನಡೆಸಿದ ವೆಡ್ಡಿಂಗ್ ವೆನ್ಯೂ ಮ್ಯಾನೇಜ್‌ಮೆಂಟ್ ಹಾಗೂ ಹೆಲಿಕಾಪ್ಟರ್ ಸಂಸ್ಥೆಯ ಗಂಭೀರ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಆರೋಪಿಸಿ, ಪರಿಹಾರ ಕೋರಿ ಜೆಸ್ನಿ ಸ್ಯಾಮ್ ಪರ ವಕೀಲರು ಸೆಪ್ಟೆಂಬರ್ 22 ರಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.