ಕೌಟುಂಬಿಕ ಕಲಹದ ಪ್ರಕರಣವೊಂದರಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯ ಮಹತ್ವದ ತೀರ್ಪೊಂದನ್ನು ನೀಡಿದೆ. 19 ವರ್ಷದ ಯುವತಿಗೆ ಆಕೆಯ 40 ವರ್ಷದ ಪತಿಯನ್ನು ಬಿಟ್ಟು ಪ್ರಿಯಕರನೊಂದಿಗೆ ಬದುಕಲು ಕೋರ್ಟ್ ಅನುಮತಿ ನೀಡಿದೆ. ಈ ಮೂಲಕ ವಿವಾಹಿತೆ ತನ್ನ ಪ್ರಿಯಕರನೊಂದಿಗೆ ವಾಸಿಸಲು ಕಾನೂನು ಬೆಂಬಲ ಪಡೆದಿದ್ದಾಳೆ. ಮಧ್ಯಪ್ರದೇಶ ಹೈಕೋರ್ಟ್‌ನ ಗ್ವಾಲಿಯರ್ ಪೀಠವು ಯುವತಿಗೆ ಆಯ್ಕೆ ಮಾಡಿರಿವ ಪುರುಷನೊಂದಿಗೆ ಸ್ವತಂತ್ರವಾಗಿ ಬದುಕಲು ಅವಕಾಶ ನೀಡಿದೆ. 40 ವರ್ಷದ ಪತಿಯೊಂದಿಗೆ ಬದುಕಲು ಸಾಧ್ಯವೇ ಇಲ್ಲ ಎಂದಿದ್ದ ಆ ಯುವತಿಗೆ ಕೋರ್ಟ್ ಆಯ್ಕೆಯ ಸ್ವಾತಂತ್ರ್ಯ ನೀಡುವ ಮೂಲಕ ಮದುವೆಯನ್ನು ರದ್ದುಗೊಳಿಸಲು ಅನುಮತಿ ನೀಡಿದೆ.
19 ವರ್ಷದ ಯುವತಿಗೆ ತನ್ನ ಪತಿಯೊಂದಿಗೆ ಬದುಕುವುದು ಇಷ್ಟವಿರಲಿಲ್ಲ. ಮನೆಯಿಂದ ಬರುವಾಗ ಪತಿ ಆಕೆಯ ಮನವೊಲಿಸಿ ತನ್ನ ಜೊತೆಗೆ ಇರಲು ಒಪ್ಪಿಸಿ ಕರೆತಂದಿದ್ದ. ಆದರೆ, ಆಕೆಯ ಪತಿ, ಪೋಷಕರು ಮತ್ತು ಆಕೆಯ ಪ್ರೇಮಿ ನ್ಯಾಯಾಲಯದ ಹೊರಗೆ ಕಾಯುತ್ತಿದ್ದಾಗ ಆಕೆ ಕೋರ್ಟ್ನೊಳಗೆ ನ್ಯಾಯಾಧೀಶರ ಮುಂದೆ ತಾನು ಪ್ರಿಯಕರನ ಜೊತೆಯೇ ಹೋಗುತ್ತೇನೆ ಎಂದು ಹೇಳಿದ್ದಾಳೆ. “ನಾನು ವಯಸ್ಕಳು. ನಾನು ನನ್ನ ಸ್ವಂತ ಇಚ್ಛೆಯ ಮೇಲೆ ಬದುಕುತ್ತಿದ್ದೇನೆ. ನನ್ನ ಪತಿ ಅಥವಾ ನನ್ನ ಪೋಷಕರೊಂದಿಗೆ ಇರಲು ನಾನು ಬಯಸುವುದಿಲ್ಲ” ಎಂದು ಆಕೆ ನ್ಯಾಯಾಲಯಕ್ಕೆ ತಿಳಿಸಿದ್ದಾಳೆ. ಆಕೆಯ ನಿರ್ಧಾರವನ್ನು ಮಧ್ಯಪ್ರದೇಶದ ಹೈಕೋರ್ಟ್‌ನ ಗ್ವಾಲಿಯರ್ ಪೀಠವು ಒಪ್ಪಿಕೊಂಡಿತು.
ತನಗಿಂತ 2 ಪಟ್ಟು ಹೆಚ್ಚು ವಯಸ್ಸಿನವನೊಂದಿಗೆ ಮನೆಯವರು 19ವರ್ಷದ ಯುವತಿಗೆ ಮದುವೆ ಮಾಡಿಕೊಟ್ಟಿದ್ದರು. ಆ ಮದುವೆಯಿಂದ ಆಕೆ ಸಂತೋಷವಾಗಿರಲಿಲ್ಲ. ಆಕೆಗೆ ಇನ್ನೋರ್ವ ಯುವಕನ ಮೇಲೆ ಮನಸಾಗಿತ್ತು. ಈ ಕುರಿತು ನ್ಯಾಯಾಲಯದ ಮೊರೆ ಹೋಗಿದ್ದ ಆಕೆ ತಾನು ತನ್ನ ಮನೆಯಲ್ಲಿ ವಯಸ್ಸಾದ ಪತಿಯಿಂದ ಯಾವ ರೀತಿ ದೌರ್ಜನ್ಯವನ್ನು ಸಹಿಸಿಕೊಂಡಿದ್ದೇನೆ. ತನ್ನ ತವರು ಮನೆಯವರು ಯಾವ ರೀತಿ ತನ್ನನ್ನು ದೂರ ಇಟ್ಟಿದ್ದಾರೆ. ಎರಡೂ ಕಡೆಯಲ್ಲೂ ಆಶ್ರಯ ಸಿಗದೆ ತಾನು ಹೇಗೆ ಕಷ್ಟ ಅನುಭವಿಸುತ್ತಿದ್ದೇನೆ ಎಂಬುದರ ಬಗ್ಗೆ ಹೇಳಿಕೊಂಡಿದ್ದಳು.
ನ್ಯಾಯಮೂರ್ತಿಗಳಾದ ಆನಂದ್ ಪಾಠಕ್ ಮತ್ತು ಪುಷ್ಪೇಂದ್ರ ಯಾದವ್ ಅವರ ವಿಭಾಗೀಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. ಎಪ್ರಿಲ್ 2ರಂದು ಆಕೆಯ ಪತಿ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಆಕೆಯನ್ನು ಇನ್ನೊಬ್ಬ ಪುರುಷ ಕಾನೂನುಬಾಹಿರವಾಗಿ ವಶದಲ್ಲಿಟ್ಟುಕೊಂಡಿದ್ದಾನೆ ಎಂದು ಆರೋಪಿಸಲಾಗಿತ್ತು. ಆದರೆ, ತನ್ನ ಪತಿ, ಪೋಷಕರು ಮತ್ತು ಪ್ರಿಯಕರನೊಂದಿಗೆ ನ್ಯಾಯಾಲಯಕ್ಕೆ ಹಾಜರಾದ ಆ ಯುವತಿ ತನ್ನ ಪತಿ ಮಾಡಿರುವ ಆರೋಪಗಳನ್ನು ದೃಢವಾಗಿ ತಳ್ಳಿಹಾಕಿದ ನಂತರ ಈ ಪ್ರಕರಣವು ನಾಟಕೀಯ ತಿರುವು ಪಡೆದುಕೊಂಡಿತು.
ನನ್ನನ್ನು ಯಾರೂ ಬಲವಂತವಾಗಿ ಕರೆದುಕೊಂಡು ಹೋಗಿಲ್ಲ. ನನ್ನ ಪತಿಯ ಕಿರುಕುಳ ತಾಳಲಾರದೆ ಅಪ್ಪನ ಮನೆಗೆ ಹೋದಾಗ ಅಲ್ಲಿ ಕೂಡ ನನಗೆ ಆಶ್ರಯ ಸಿಗಲಿಲ್ಲ. ನಾನು ಪ್ರೀತಿಸುತ್ತಿರುವ ಯುವಕನ ಜೊತೆ ಹೋದ ಬಳಿಕವೇ ನನಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು. ನನ್ನ ಸಂತೋಷ ಬಯಸದ, ನನ್ನ ಹಿತೈಷಿಗಳಲ್ಲದವರ ಜೊತೆ ವಾಪಾಸ್ ಹೋಗುವ ಪ್ರಶ್ನೆಯೇ ಇಲ್ಲ ಎಂದು ಆಕೆಯ ನ್ಯಾಯಾಧೀಶರ ಮುಂದೆ ಹೇಳಿದ್ದಾಳೆ. ಅಲ್ಲದೆ, ಆಕೆಯನ್ನು ಸೆರೆಯಲ್ಲಿಟ್ಟಿದ್ದ ಆರೋಪ ಹೊತ್ತಿರುವ ಆಕೆಯ ಪ್ರೇಮಿಯ ಜೊತೆಯೇ ಇರಲು ಬಯಸುವುದಾಗಿ ಆಕೆ ಹೇಳಿದ್ದಾಳೆ.
ಆಕೆಯ ಪ್ರಿಯಕರನನ್ನು ಕೂಡ ಈ ಬಗ್ಗೆ ವಿಚಾರಿಸಲಾಯಿತು. ಆತನೂ ಆ ಯುವತಿಯನ್ನು ಪ್ರೀತಿ ಮಾಡುತ್ತಿರುವುದಾಗಿ ಹೇಳಿಕೆ ನೀಡಿದನು. ಅವಳ ವಿಚ್ಛೇದನದ ನಂತರ ಅವಳನ್ನು ಮದುವೆಯಾಗುವ ಉದ್ದೇಶವಿದೆ ಎಂದು ಕೂಡ ಹೇಳಿದನು. ಯಾವುದೇ ರೀತಿಯಲ್ಲಿ ಅವಳಿಗೆ ಕಿರುಕುಳ ನೀಡುವುದಿಲ್ಲ ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದನು.
ಆಕೆಯ ಗಂಡನ ವಯಸ್ಸು, ಆಕೆಯ ವಯಸ್ಸು ಗಮನಿಸಿದ ನ್ಯಾಯಾಲಯವು ಆಕೆ ತನ್ನ ಸ್ವಂತ ಇಚ್ಛೆಯಂತೆ ನಿರ್ಧಾರ ತೆಗೆದುಕೊಳ್ಳುವ ಪ್ರೌಢಿಮೆ ಹೊಂದಿದ್ದಾಳೆ ಎಂದು ದೃಢಪಡಿಸಿತು.