ಐಷಾರಾಮಿ ಕಾರನ್ನು ರಿಜಿಸ್ಟ್ರಾರ್ ಮಾಡದೆ ಟ್ಯಾಕ್ಸ್ ಕಟ್ಟದೆ ವಂಚನೆ- ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ಮಾಡಿ ತಗ್ಲಾಕ್ಕೊಂಡ ರಿಕ್ಕಿ ರೈ




ಬೆಂಗಳೂರು: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ಪ್ರಕರಣಕ್ಕೆ ಹೊಸ ತಿರುವು ದೊರಕಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ರಿಕ್ಕಿ ರೈ ವಿರುದ್ಧ ವಂಚನೆ ಕೇಸ್ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ರಿಕ್ಕಿ ರೈ ದೆಹಲಿಯಿಂದ ಖರೀದಿಸಿದ ದುಬಾರಿ ಲ್ಯಾಂಬೋರ್ಗಿನಿ ಕಾರ್ ಅನ್ನು ಬೆಂಗಳೂರಿನಲ್ಲಿ ರಿಜಿಸ್ಟರ್ ಮಾಡಿಸದೇ, ಲಕ್ಷಾಂತರ ರೂಪಾಯಿ ತೆರಿಗೆ ಪಾವತಿಸದೆ ಫ್ಯಾನ್ಸಿ ನಂಬರ್ ಪ್ಲೇಟ್ ಅಳವಡಿಸಿ ಓಡಿಸುತ್ತಿದ್ದಾರೆಯೆಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ರಿಕ್ಕಿ ರೈ ಕಾರಿಗೆ ಹೊಸ ಬಣ್ಣ ಮಾಡಿಸಿ ಬೆಂಗಳೂರಿಗೆ ತಂದು, ಆರ್‌ಟಿಒದಲ್ಲಿ ರಿಜಿಸ್ಟ್ರೇಶನ್ ಮಾಡಿಸದೇ, KA-05 NR 0009 ನಕಲಿ ನಂಬ‌ರ್ ಪ್ಲೇಟ್ ಅಳವಡಿಸಿದ್ದರು. ಕಾರಿನ ವಾಸ್ತವಿಕ ನೋಂದಣಿ ಸಂಖ್ಯೆ DL 1 CT 1515 ಆಗಿದೆ. ಇದು ಗುಜರಾತ್ ಮೂಲದ ರಬಾರ ಭಾವನಾಬೆನ್ ವಿನೋದ್ ಕುಮಾರ್ ಅವರ ಹೆಸರಿನಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಬ್ಬನ್‌ ಪಾರ್ಕ್‌ ಸಂಚಾರ ಪೊಲೀಸರು ದಾಖಲೆ ಪರಿಶೀಲನೆ ವೇಳೆ ಈ ವಂಚನೆ ಪ್ರಕರಣ ಬೆಳವಣಿಗೆ ಬಂದಿದೆ. ಹಿಂದೆ ಆರ್‌ಟಿಒ ಅಧಿಕಾರಿಗಳು ರಿಕ್ಕಿ ರೈ ಅವರನ್ನು ಎರಡು ಬಾರಿ ದಂಡಿಸಿದರೂ, ಅವರು ಟ್ಯಾಕ್ಸ್ ಕಟ್ಟದೆ ಮತ್ತು ರಿಜಿಸ್ಟ್ರೇಷನ್‌ ಮಾಡಿಸದೇ ಕಾರು ಓಡಿಸುತ್ತಿದ್ದರು ಎಂದು ತಿಳಿಸಿದ್ದಾರೆ.

ರಿಕ್ಕಿ ರೈ ಕಾರನ್ನು ಎರಡು ಸ್ಥಳಗಳಲ್ಲಿ ಡ್ರಿಫ್ಟ್ ಮಾಡಿದ್ದು ವಿಡಿಯೋ ದೃಶ್ಯಗಳಿಂದ ಗೊತ್ತಾಗಿದೆ. ಮೊದಲು ಅನಿಲ್ ಕುಂಬ್ಳೆ ಸರ್ಕಲ್, ಬಳಿಕ ಕಬ್ಬನ್ ಸರ್ಕಲ್. ಈ ಹಿನ್ನೆಲೆಯಲ್ಲಿ, ಪೊಲೀಸ್ ಅಧಿಕಾರಿಗಳು ರಿಕ್ಕಿ ರೈಗೆ ನೋಟಿಸ್‌ ನೀಡಿದ್ದಾರೆ. ರಿಕ್ಕಿ ರೈ ತಾತ್ಕಾಲಿಕವಾಗಿ "ಹೊರ ರಾಜ್ಯದಲ್ಲಿದ್ದೇನೆ, ಬರುತ್ತೇನೆ" ಎಂದು ಪ್ರತಿಕ್ರಿಯಿಸಿದ್ದಾರೆ, ಆದರೆ ಎರಡು ದಿನಗಳಿಂದ ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಕಾರು ಪ್ರಸ್ತುತ ಪೊಲೀಸ್ ವಶದಲ್ಲಿರಿಸಲಾಗಿದೆ.

ಇದೀಗ ಪೊಲೀಸರು ಡ್ರಿಫ್ಟಿಂಗ್ ಪ್ರಕರಣದೊಂದಿಗೆ ವಂಚನೆ ಪ್ರಕರಣದ ಮೇಲೆ ಮತ್ತೊಂದು ಎಫ್‌ಐಆರ್ ದಾಖಲಿಸಿದ್ದಾರೆ. ಐಷಾರಾಮಿ ಕಾರಿನ ನಕಲಿ ನೋಂದಣಿ ಮತ್ತು ಟ್ಯಾಕ್ಸ್ ತಪ್ಪಿಸುವ ಪ್ರಕರಣವು ಸಾರ್ವಜನಿಕರ ಗಮನ ಸೆಳೆದಿದ್ದು, ಇದು ಬೆಂಗಳೂರಿನ ಸಂಚಾರ ನಿಯಮ ಉಲ್ಲಂಘನೆಯ ಹೊಸ ಬೆಳವಣಿಗೆ ಎಂದು ಚಿತ್ರಿಸಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu