ಜೈಲಿನಲ್ಲಿ‌ ಖೈದಿಗಳಿಂದ ಮೊಬೈಲ್ ಫೋನ್ ಬಳಕೆ : ತನಿಖೆಗೆ ಸೂಚನೆ

ಜೈಲಿನಲ್ಲಿ ಮೊಬೈಲ್ ಬಳಕೆ ತನಿಖೆ

ವಿಕೃತ ಕಾಮಿ ಉಮೇಶ್ ರೆಡ್ಡಿ ಸೇರಿದಂತೆ
ಜೈಲಿನಲ್ಲಿ‌ ಖೈದಿಗಳಿಂದ ಮೊಬೈಲ್ ಫೋನ್ ಬಳಕೆ : ತನಿಖೆಗೆ ಸೂಚನೆ

ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದ ಖೈದಿಗಳು ಮೊಬೈಲ್ ಫೋನ್ ಬಳಸುತ್ತಿದ್ದ , ವಿಶೇಷ ಆತಿಥ್ಯ ದೊರಯುತ್ತಿರುವ ದೃಶ್ಯಗಳು ಬಹಿರಂಗಗೊಂಡ ಬೆನ್ನಲ್ಲೇ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಳ್ಳಲಾಗಿದ್ದು, ದೃಶ್ಯಗಳು ಅಸಲಿಯೆಂದು ಮೇಲ್ನೋಟಕ್ಕೆ ಸಾಬೀತಾಗಿವೆ ಎಂದು ಹೆಚ್ಚುವರಿ ಕಾರಾಗೃಹಗಳ ಮಹಾನಿರೀಕ್ಷಕ ಪಿ.ವಿ.ಆನಂದ್ ರೆಡ್ಡಿ ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.
ವೈರಲ್ ಆಗಿರುವ ವಿಡಿಯೋಗಳ ಪೈಕಿ ಕೆಲವೊಂದು 2023ರಲ್ಲಿ ವಿಡಿಯೋಗಳನ್ನ ಚಿತ್ರೀಕರಿಸಲಾಗಿದ್ದು, ಇನ್ನೂ ಕೆಲವು ವಿಡಿಯೋಗಳನ್ನು 2025ರಲ್ಲಿ ಚಿತ್ರೀಕರಿಸಿರುವುದು ಮೇಲ್ನೋಟಕ್ಕೆ ಖಚಿತವಾಗಿದೆ. ಕಾರಾಗೃಹದೊಳಗೆ ಮೊಬೈಲ್ ಫೋನ್‌ಗಳನ್ನ ತಂದವರು ಯಾರು?, ಖೈದಿಗಳಿಗೆ ನೀಡಿದವರು ಯಾರು?, ಖೈದಿಗಳು ಮೊಬೈಲ್ ಬಳಸುತ್ತಿರುವ ವಿಡಿಯೋಗಳನ್ನ ಚಿತ್ರೀಕರಿಸಿ ಹರಿಬಿಟ್ಟವರು ಯಾರು? ಎಂಬುದನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲು ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳನ್ನ ದಾಖಲಿಸಿ ತನಿಖೆ ನಡೆಸಲು ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ನಿರ್ದೇಶನ ನೀಡಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಪ್ರಾಥಮಿಕ ಇಲಾಖಾ ತನಿಖೆ ಕೈಗೊಂಡು ವರದಿ ನೀಡುವಂತೆ ದಕ್ಷಿಣ ವಲಯದ ಉಪ ಮಹಾನಿರೀಕ್ಷಕರಿಗೆ ಸೂಚಿಸಲಾಗಿದೆ. ಆ ವರದಿಯ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಾಧ್ಯಮ ಪ್ರಕಟಣೆಯ ಮೂಲಕ ಮಾಹಿತಿ ನೀಡಲಾಗಿದೆ.
ಐಸಿಸ್ ಭಯೋತ್ಪಾದಕ ಸಂಘಟನೆಗಾಗಿ ಹಣ ಸಂಗ್ರಹ, ಯುವಕರ ನೇಮಕಾತಿ ಆರೋಪದಡಿ 2021ರಲ್ಲಿ ಎನ್ಐಎದಿಂದ ಬಂಧಿತವಾಗಿದ್ದ ಜುಹಾಬ್ ಹಮೀದ್ ಶಕೀಲ್ ಮನ್ನ, 2009ರಿಂದಲೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಸೀರಿಯಲ್ ಕಿಲ್ಲರ್ ಉಮೇಶ್ ರೆಡ್ಡಿ, ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಬಂಧನವಾಗಿರುವ ಆರೋಪಿ ತರಣ್ ರಾಜ್​​ಗೆ ಸೆಲ್‌ನಲ್ಲಿ ಮೊಬೈಲ್ ಫೋನ್‌ಗಳು, ಟಿವಿ ವ್ಯವಸ್ಥೆ ಸೇರಿದಂತೆ ವಿಶೇಷ ಸೌಲಭ್ಯಗಳು ಲಭ್ಯವಾಗುತ್ತಿರುವ ವಿಡಿಯೋಗಳು ಇತ್ತೀಚಿಗೆ ವೈರಲ್ ಆಗಿದ್ದವು.
ಈ ದೃಶ್ಯಗಳು ಬಹಿರಂಗವಾಗುತ್ತಿದ್ದಂತೆ ಸಂಬಂಧಪಟ್ಟ ಖೈದಿಗಳ ಬ್ಯಾರಕ್‌ಗಳನ್ನು ಪರಿಶೀಲನೆ ನಡೆಸುವಂತೆ ಜೈಲಾಧಿಕಾರಿಗಳಿಗೆ ಕಾರಾಗೃಹ ಹಾಗೂ ಸುಧಾರಣಾ ಇಲಾಖೆಯ ಎಡಿಜಿಪಿ ಬಿ.ದಯಾನಂದ್ ಸೂಚಿಸಿದ್ದರು.
ಮಾಹಿತಿ ಪಡೆದುಕೊಂಡು ಮಾತನಾಡುವೆ ಎಂದ ಸಿಎಂ: ಖೈದಿಗಳಿಗೆ ವಿಶೇಷ ಆತಿಥ್ಯ ದೊರೆಯುತ್ತಿರುವ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, "ಅದರ ಬಗ್ಗೆ ನನಗೆ ಗೊತ್ತಿಲ್ಲ, ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ" ಎಂದು ತಿಳಿಸಿದ್ದಾರೆ.