2ಲಕ್ಷದ ಗಿಳಿಯನ್ನು ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ



ಬೆಂಗಳೂರು: ಸಾಕು ಗಿಳಿಯನ್ನು ರಕ್ಷಿಸಲು ಹೋದ ಯುವಕನೋರ್ವನು ವಿದ್ಯುತ್ ಆಘಾತದಿಂದ ಮೃತಪಟ್ಟ ಘಟನೆ ರಾಜಧಾನಿಯ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ವೀರಭದ್ರ ನಗರದಲ್ಲಿ ಸಂಭವಿಸಿದೆ. 

ಅರುಣ್ ಕುಮಾರ್ (32) ಮೃತಪಟ್ಟ ಯುವಕ.

ಲಿಖಿತಾ ಎಂಬವರು 2 ಲಕ್ಷ ರೂ. ವಿದೇಶಿ ಗಿಳಿಯೊಂದನ್ನು ತಮ್ಮ ಫ್ಲಾಟ್‌ನಲ್ಲಿ ಸಾಕಿದ್ದರು. ಈ ಗಿಳಿ ಅಪಾರ್ಟ್‌ಮೆಂಟ್‌ ಆವರಣದಲ್ಲಿರುವ ಹೈಟೆನ್ಷನ್ ವೈರ್ ಕಂಬದ ಮೇಲೆ ಕುಳಿತಿತ್ತು. ಇದನ್ನು ನೋಡಿದ ಲಿಖಿತಾರ ಸಂಬಂಧಿ ಅರುಣ್‌ ಕುಮಾರ್ ಅವರು ಕಬ್ಬಿಣದ ಪೈಪ್‌ಗೆ ಮರದ ತುಂಡನ್ನು ಕಟ್ಟಿ ಅಪಾರ್ಟ್‌ಮೆಂಟ್ ಕಾಂಪೌಂಡ್ ಮೇಲೆ ನಿಂತು ಗಿಳಿಯನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ 66 ಸಾವಿರ ಕೆ.ವಿ ವಿದ್ಯುತ್ ಪ್ರವಹಿಸಿದ ಪರಿಣಾಮ ಅರುಣ್ ಕುಮಾರ್, ಕಾಂಪೌಂಡ್ ಮೇಲಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು, ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಅಪಾರ್ಟ್‌ಮೆಂಟ್ ಆವರಣದೊಳಗೆ ಹೈಟೆನ್ಷನ್ ವೈರ್‌ಗಳು ಇರುವುದಕ್ಕೆ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಗಿರಿನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಂಡ್ಯದ ನಾಗಮಂಗಲ ಮೂಲದ ಅರುಣ್ ಕುಮಾ‌ರ್, ತನ್ನ ಚಿಕ್ಕಮ್ಮನ ಮನೆಗೆ ಆಗಾಗ ಬಂದು ಉಳಿದುಕೊಳ್ಳುತ್ತಿದ್ದರು‌. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಅರುಣ್, ತಾಯಿಗೆ ಆಸರೆಯಾಗಿದ್ದರು.