ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್‌ರನ್ನು ಕೊಲೆಗೈಯಿರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ರಂಜಿತ್ ಆರ್.ಎಂ. ಬಂಧಿತ ವ್ಯಕ್ತಿ. ಈತ ಡಿ.ಕೆ. ಸಹೋದರರನ್ನು ಕೊಲ್ಲಿ' ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದ. ಹಿನ್ನೆಲೆಯಲ್ಲಿ ಬೆಂಗಳೂರಿನ ಜಯನಗರ ಬ್ಲಾಕ್‌ನ ಯುವ ಕಾಂಗ್ರೆಸ್ ಅಧ್ಯಕ್ಷ ಶರತ್ ಪೊಲೀಸ್ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೆ ಪೊಲೀಸರು ಬುಧವಾರ ರಂಜಿತ್ ನನ್ನು ಬಂಧಿಸಿದ್ದಾರೆ.
ಬಂಧಿತ ನಿರಂತರವಾಗಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷ ಮತ್ತು ಮುಸ್ಲಿಮ್ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಪೋಸ್ಟ್ ಗಳನ್ನು ಹಾಕುತ್ತಿದ್ದನು. ಡಿಕೆ ಶಿವಕುಮಾರ್ ಮತ್ತು ಅವರ ಸಹೋದರ ಸುರೇಶ್ ಅವರನ್ನು ಉಲ್ಲೇಖಿಸಲು ಡಿಕೆ ಸಹೋದರರು ಎಂಬ ಪದವನ್ನು ಬಳಸಿದ್ದ.
ಆರೋಪಿಯು ಬೆಂಗಳೂರು ನಗರ ಪೊಲೀಸರ ಬಳಿ ಸೈಬರ್ ಕ್ರೈಂ ಡಿಟೆಕ್ಟಿವ್ ಎಂದು ಹೇಳಿಕೊಂಡಿದ್ದು, ಜಯನಗರ ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.