-->
ಮಂಗಳೂರು: ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಣೆ ವಿಳಂಬ ಧೋರಣೆ - ಮನಪಾ ಆಯುಕ್ತರ ಕಚೇರಿಗೆ ಮುತ್ತಿಗೆ

ಮಂಗಳೂರು: ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಣೆ ವಿಳಂಬ ಧೋರಣೆ - ಮನಪಾ ಆಯುಕ್ತರ ಕಚೇರಿಗೆ ಮುತ್ತಿಗೆ



ಮಂಗಳೂರು: ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ಪ್ರಮಾಣ ಪತ್ರವನ್ನು ವಿಳಂಬವಾಗಿ ವಿತರಿಸಿರುವ ಧೋರಣೆಯನ್ನು ಖಂಡಿಸಿ ನೂರಾರು ಬೀದಿಬದಿ ವ್ಯಾಪಾರಿಗಳು ಮನಪಾ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿದರು.

ತಕ್ಷಣ ಗುರುತಿನ ಚೀಟಿ ಹಾಗೂ ಪ್ರಮಾಣ ಪತ್ರ ನೀಡದಿದ್ದಲ್ಲಿ ಇಲ್ಲಿಂದ ಕದಲುವುದಿಲ್ಲ ಎಂದು ಬೀದಿಬದಿ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬರ್ಕೆ ಠಾಣಾ ಇನ್ ಸ್ಪೆಕ್ಟರ್ ನಾಗೇಶ್ ಹಸ್ಲಾರ್ ಅವರು ಮುತ್ತಿಗೆ ಹಾಕಿರುವ ಬೀದಿಬದಿ ವ್ಯಾಪಾರಿಗಳ ಮನವೊಲಿಕೆ ಮಾಡಿ ಅಲ್ಲಿಂದ ಹೊರಡುವಂತೆ ಸೂಚಿಸಿದರು. ಆದರೆ ಯಾರೂ ಅಲ್ಲಿಂದ ಕದಲದೆ ನಮಗೆ ತಕ್ಷಣ ಗುರುತಿನ ಚೀಟಿ ನೀಡಿ ಎಂದು ಆಗ್ರಹಿಸಿದರು. ಈ ವೇಳೆ ಅಲ್ಲಿ ಹೈಡ್ರಾಮಾವೇ ನಡೆಯಿತು. ಬಳಿಕ ಎಸಿಪಿ ಮಹೇಶ್ ಪ್ರಸಾದ್ ಅವರೂ ಆಗಮಿಸಿ ಮನವೊಲಿಕೆಗೆ ಯತ್ನಿಸಿದರು. 


3 ವರ್ಷಗಳಿಂದ ಬೀದಿಬದಿ ವ್ಯಾಪಾರಿಗಳ ಪ್ರಮಾಣ ಪತ್ರವಾಗಲೀ, ಗುರುತಿನ ಚೀಟಿಯನ್ನಾಗಲೀ ನವೀಕರಿಸಿಲ್ಲ. ಹಲವು ವರ್ಷಗಳಿಂದ ಮನಪಾ ಆಯುಕ್ತರು ನಾಟಕವಾಡುತ್ತಾ, ಜನಪ್ರತಿನಿಧಿಗಳ ತಾಳಕ್ಕೆ ಕುಣಿಯುತ್ತಾ ಬೀದಿಬದಿ ವ್ಯಾಪಾರಿಗಳೊಂದಿಗೆ ಹೀನಾಯವಾಗಿ ಮಾತನಾಡಿ, ಕಡೆಗಣಿಸುತ್ತಿದ್ದಾರೆ. ಮಹಾನಗರ ಪಾಲಿಕೆ ಬೀದಿಬದಿ ವ್ಯಾಪಾರಿಗಳನ್ನು ಕಡೆಗಣಿಸುತ್ತಿರುದಕ್ಕೆ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರೇ ನೇರ ಹೊಣೆ‌. ಅವರ ಒತ್ತಡಕ್ಕೆ ಮಣಿದು ಅಧಿಕಾರಿಗಳು ಪ್ರಮಾಣ ಪತ್ರ, ಗುರುತಿನ ಚೀಟಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಬೀದಿಬದಿ ವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಆರೋಪಿಸಿದರು.


ಬಳಿಕ ಬೀದಿಬದಿ ವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಸೇರಿದಂತೆ ಕೆಲ ಮುಖಂಡರನ್ನು ಮನಪಾ ಆಯುಕ್ತ ಆನಂದ್ ಎಲ್.ಸಿ. ತಮ್ಮ ಕಚೇರಿಯೊಳಗೆ ಕರೆದು ಮಾತನಾಡಿದರು. ಬಳಿಕ  ಮಾತನಾಡಿದ ಅವರು, ತಾವು ಸೆಪ್ಟೆಂಬರ್ 30ರೊಳಗೆ  ಕಾರ್ಯಕ್ರಮವನ್ನೇ ಮಾಡಿ ಉಸ್ತುವಾರಿ ಸಚಿವರಿಂದಲೇ 647 ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ಪ್ರಮಾಣ ಪತ್ರ ವಿತರಿಸಲಾಗುತ್ತದೆ ಎಂದು ಭರವಸೆ ನೀಡಿದರು. ಬಳಿಕ ಬಿ.ಕೆ. ಇಮ್ತಿಯಾಝ್ ಮಾತನಾಡಿ, ಒಂದು ವೇಳೆ ನಿಗದಿತ ದಿನದೊಳಗೆ ಮನಪಾ ಆಯುಕ್ತರು ಗುರುತಿನ ಚೀಟಿ ನೀಡದಿದ್ದಲ್ಲಿ ಜಿಲ್ಲಾಡಳಿತದಿಂದ ಆಚರಿಸಲಾಗುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರು ಮಾತನಾಡುತ್ತಿರುವಾಗಲೇ ಕಪ್ಪುಬಾವುಟ ಹಿಡಿದು ಪ್ರತಿಭಟನೆ ನಡೆಸುತ್ತೇವೆ ಎಂದು ಆಗ್ರಹಿಸಿದರು. ಈ ಮೂಲಕ ಕೆಲಹೊತ್ತು ನಡೆದ ಮನಪಾ ಕಚೇರಿಯಲ್ಲಿ ಹೈಡ್ರಾಮಾಕ್ಕೆ ತೆರೆ ಎಳೆದಂತಾಗಿದೆ.



Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article