ನಾಲ್ಕು ತಿಂಗಳ ಹಸುಗೂಸನ್ನು ನೆಲಕ್ಕೆ ಎಸೆದು ಕೊಲೆಗೈದ ಕೆಎಸ್‌ಐಎಸ್‌ಎಫ್‌ ಕಾನ್‌ಸ್ಟೆಬಲ್‌


ಬೆಳಗಾವಿ: ಕೆಎಸ್‌ಐಎಸ್‌ಎಫ್‌ ಕಾನ್‌ಸ್ಟೆಬಲ್‌ ಒಬ್ಬನು ತನ್ನದೇ ನಾಲ್ಕು ತಿಂಗಳ ಹಸುಗೂಸನ್ನು ನೆಲಕ್ಕೆ ಎಸೆದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ನಡೆದಿದೆ.

ಗೋಕಾಕ ತಾಲೂಕಿನ ದುರದುಂಡಿ ಗ್ರಾಮದ ಕೆಎಸ್‌ಐಎಸ್‌ಎಫ್‌ ಕಾನ್‌ಸ್ಟೆಬಲ್‌ ಬಸಪ್ಪ ಬಾಳುಂಕಿ ಹಸುಗೂಸನ್ನು ಕೊಲೆಗೈದ ಆರೋಪಿ. ಈತ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕೆಲಸಕ್ಕೆ ನಿಯೋಜನೆಗೊಂಡಿದ್ದ ಎಂದು ತಿಳಿದು ಬಂದಿದೆ.

ಸೆಪ್ಟೆಂಬರ್ 18 ರಂದು ಈ ಘಟನೆ ನಡೆದಿದೆ. ಆದರೆ ತಡವಾಗಿ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 18 ರಂದು ಚಿಂಚಲಿ ಗ್ರಾಮಕ್ಕೆ ಬಂದ ಬಸಪ್ಪ ಬಾಳುಂಕಿ ಕುಟುಂಬಸ್ಥರೊಂದಿಗೆ ಜಗಳ ಮಾಡಿದ್ದಾನೆ. ಬಳಿಕ ತನ್ನ ನಾಲ್ಕು ತಿಂಗಳ ಮಗುವನ್ನು ಹತ್ಯೆ ಮಾಡಿದ್ದಾನೆ. ಅಲ್ಲದೇ ಆತ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ' ಎಂದು ಆರೋಪಿ ಬಸಪ್ಪನ ಪತ್ನಿ ಲಕ್ಷ್ಮಿಹಾಗೂ ಅವರ ಪೋಷಕರು ಕುಡಚಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆರೋಪಿಯನು ಬಂಧಿಸಿರುವ ಕುಡಚಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.