Mangalore- ಬಾಂಗ್ ಚಾಕ್ಲೆಟ್ ನಲ್ಲಿತ್ತು ಗಾಂಜಾ ಅಂಶ - ಕಾರ್ ಸ್ಟ್ರೀಟ್ ನ ಮನೋಹರ ಶೇಟ್ , ಉತ್ತರ ಪ್ರದೇಶದ ಬೆಚನ್ ಸೋನ್ಕರ್ ಬಂಧನ




ಮಂಗಳೂರು: ಇತ್ತೀಚಿಗೆ ನಗರದ ಕಾರ್ ಸ್ಟ್ರೀಟ್ ಮತ್ತು ಫಳ್ನೀರ್ ನ  ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದ ಬಾಂಗ್ ಚಾಕ್ಲೆಟ್ ನ್ನು ವಶಪಡಿಸಿಕೊಂಡಿದ್ದ ಪೊಲೀಸರು ಅದನ್ನು ತಪಾಸಣೆ ನಡೆಸಿದಾಗ ಅದರಲ್ಲಿ ಗಾಂಜಾ ಇರುವುದು ಪತ್ತೆಯಾಗಿದೆ.

ಗಾಂಜಾ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಕಾರ್ ಸ್ಟ್ರೀಟ್ ನ  ಮನೋಹರ ಶೇಟ್ , ಉತ್ತರ ಪ್ರದೇಶದ ಬೆಚನ್ ಸೋನ್ಕರ್ ನನ್ನು  ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗೆ ಮಂಗಳೂರು ‌ನಗರ ಉತ್ತರ‌ ಠಾಣಾ  ಪೊಲೀಸರು  ಕಾರ್ಯಾಚರಣೆ ನಡೆಸಿ ನಗರದ ಕಾರ್ ಸ್ಟ್ರೀಟ್ ನಲ್ಲಿ ಪೂಜಾ ಪ್ಯಾಲೇಸ್ ಕಟ್ಟಡದಲ್ಲಿರುವ ವೈಭವ ಪೂಜಾ ಸೇಲ್ಸ್ ಎಂಬ ಅಂಗಡಿಯಲ್ಲಿ  ಮನೋಹರ್ ಶೇಟ್ ಎಂಬಾತನ ವಶದಿಂದ ರೂ 48 ಸಾವಿರ ಮೌಲ್ಯದ ತಲಾ 40 ಬಾಂಗ್ ಚಾಕ್ಲೆಟ್ ತುಂಬಿರುವ 300 ಪ್ಯಾಕೇಟ್ ಗಳನ್ನು ಮತ್ತು 592 ಬಿಡಿ ಚಾಕೇಟ್ ಗಳನ್ನು (ಹೀಗೆ ಒಟ್ಟು 12,592 ಬಾಂಗ್ ಚಾಕೇಟ್ ಗಳನ್ನು) ವಶಪಡಿಸಿಕೊಳ್ಳಲಾಗಿತ್ತು.



 ಅದೇ ರೀತಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ನಗರದ ಫಳ್ನೀರ್ ನ ಹೈಲ್ಯಾಂಡ್ ಬಳಿ ಗೂಡಂಗಡಿಯಲ್ಲಿ ಬಾಂಗ್ ಮಿಶ್ರಿತ ಚಾಕೋಲೇಟನ್ನು ಮಾರಾಟ ಮಾಡುತ್ತಿದ್ದ ಆರೋಪಿ ಬೆಚನ್ ಸೋನ್ನರ್ ಎಂಬಾತನ ವಶದಿಂದ ರೂ. 5500/- ಮೌಲ್ಯದ ಬಾಂಗ್ ಚಾಕೋಲೇಟ್ ಗಳನ್ನು ವಶಪಡಿಸಿಕೊಂಡಿದ್ದರು.

 

ವಶಪಡಿಸಿಕೊಂಡ ಬಾಂಗ್ ಚಾಕಲೇಟ್ ಗಳನ್ನು ಅದರಲ್ಲಿರುವ ಮಾದಕ ಗಾಂಜಾ ಅಂಶದ ಪತ್ತೆ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಬಾಂಗ್ ಚಾಕಲೇಟ್ ಗಳಲ್ಲಿ ಗಾಂಜಾ ಅಂಶವಿರುವುದಾಗಿ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರದಿ ಬಂದಿರುವುದರಿಂದ ಆರೋಪಿತರ ವಿರುದ್ಧ NDPS ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮನೋಹರ್ ಶೇಟ್ ಮತ್ತು ಬೆಚನ್ ಸೋನ್ಕರ್ ನನ್ನು ಬಂಧಿಸಲಾಗಿದ್ದು, ಆರೋಪಿಗಳನ್ನು  ನ್ಯಾಯಾಲಯಲಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿರುತ್ತದೆ. ಆರೋಪಿತರು  ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುತ್ತಾರೆ