ಸುಬ್ರಹ್ಮಣ್ಯ: ಕೆಎಸ್‌ಆರ್‌ಟಿಸಿ ಸ್ಲೀಪರ್ ಕೋಚ್ ಬಸ್ ಗೆ ಕಾಡಾನೆ ದಾಳಿ - ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪಾರು


ಮಂಗಳೂರು: ಕಾಡಾನೆಯೊಂದು ಕೆಎಸ್‌ಆರ್‌ಟಿಸಿ ಸ್ಲೀಪರ್ ಕೋಚ್ ಬಸ್ ಗೆ ದಾಳಿ ಮಾಡಿರುವ ಆತಂಕಾರಿ ಘಟನೆಯೊಂದು ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯ ಅನಿಲ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ.

ಬಸ್ ಪುತ್ತೂರಿನಿಂದ ಕಾಣಿಯೂರು ಮಾರ್ಗವಾಗಿ ಸುಬ್ರಹ್ಮಣ್ಯದ ಮೂಲಕ ಬೆಂಗಳೂರಿಗೆ ಸಂಚಾರ ನಡೆಸುತ್ತಿತ್ತು. ಆದರೆ ಅನಿಲ ಎಂಬಲ್ಲಿ ರಸ್ತೆ ಬದಿ ನಿಂತಿದ್ದ ಕಾಡಾನೆಯನ್ನು ಕಂಡು ಚಾಲಕ ಬಸ್ ಅನ್ನು ನಿಲ್ಲಿಸಿ ಆನೆಯಿಂದ ತಪ್ಪಿಸಲು ಯತ್ನಿಸಿದ್ದರು. ಆದರೂ ಬಸ್ ಮೇಲೆ ದಾಳಿ ಮಾಡಿದ ಕಾಡಾನೆ ಬಸ್ಸಿನ ಎಡಭಾಗಕ್ಕೆ ದಂತದಿಂದ ತಿವಿದಿದೆ. ಅದೃಷ್ಟವಶಾತ್ ಸ್ವಲ್ಪದಲ್ಲೇ ಪ್ರಯಾಣಿಕರು ಪಾರಾಗಿದ್ದಾರೆ.

ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ದುರಂತವೊಂದು ತಪ್ಪಿದ್ದು, ಪ್ರಯಾಣಿಕರು ಆನೆ ದಾಳಿ ಸಂಭವದಿಂದ ಪಾರಾಗಿದ್ದಾರೆ. ದಾಳಿಯಿಂದ ಬಸ್ಸಿಗೆ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಬಸ್ ಬೆಂಗಳೂರಿನತ್ತ ತೆರಳಿತು.