ಪಾರ್ಟಿ ಬಳಿಕ ಮಲಗಿದ್ದ ಯುವಕ ಕಾರಿನಲ್ಲೇ ಸಾವು: ವಿಚಾರ ತಿಳಿಯುತ್ತಿದ್ದಂತೆ ಗೆಳೆಯರ ಫೋನ್ ಸ್ವಿಚ್ಆಫ್



ಹಾಸನ: ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿ ಕಾರಿನಲ್ಲಿ ಮಲಗಿದ್ದ ಯುವಕನೋರ್ವನು ಮಲಗಿದಲ್ಲೇ ಮೃತಪಟ್ಟ ಪ್ರಕರಣವೊಂದು ಹಾಸನ ಜಿಲ್ಲೆಯ ಬೇಲೂರಿನ ಕುವೆಂಪು ನಗರದಲ್ಲಿ ಈ ಪ್ರಕರಣ ನಡೆದಿದೆ. ಈತನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಜೊತೆಗೆ ಪಾರ್ಟಿ ಮಾಡಿದ್ದ ಸ್ನೇಹಿತರಿಬ್ಬರು ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿರುವುದು ಕುತೂಹಲ ಮೂಡಿಸಿದೆ.

ಚೇತನ್ (24) ಸಾವಿಗೀಡಾದ ಯುವಕ. 

ಚೇತನ್ ಬೇಲೂರಿನ ಮೊಬೈಲ್‌ ಅಂಗಡಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ನಿನ್ನೆ ರಾತ್ರಿ ಮೊಬೈಲ್‌ಫೋನ್ ಅಂಗಡಿ ಮುಂಭಾಗ ಬೈಕ್ ನಿಲ್ಲಿಸಿ ಸ್ನೇಹಿತರಾದ ಗೌತಮ್, ದರ್ಶನ್, ಮಿಥುನ್ ರೊಂದಿಗೆ ಚೇತನ್ ಪಾರ್ಟಿಗೆ ತೆರಳಿದ್ದ. ರಾತ್ರಿ ಹನ್ನೆರಡರವರೆಗೆ ಗೌತಮ್ ರೂಮ್‌ನಲ್ಲಿ ಪಾರ್ಟಿ ಮಾಡಿದ್ದರು. ಪಾರ್ಟಿ ಮುಗಿದ ಬಳಿಕ ದರ್ಶನ್, ಮಿಥುನ್, ಗೌತಮ್ ತೆರಳಿದರೆ ಮನೆಗೆ ತೆರಳಲಾಗದೆ ಚೇತನ್ ಕಾರಿನಲ್ಲೇ ಮಲಗಿದ್ದ. ಗೌತಮ್ ರೂಮ್ ಮುಂಭಾಗದಲ್ಲಿ ನಿಂತಿದ್ದ ಕಾರಿನಲ್ಲಿ ಬೆಳಗ್ಗೆ ಹತ್ತು ಗಂಟೆಯಾದರೂ ಅವರು ಎದ್ದೇಳದ್ದು ಕಂಡು ಹತ್ತಿರ ಹೋಗಿ ಗಮನಿಸಿದಾಗ ಕಾರಿನ ಹಿಂದಿನ ಸೀಟ್‌ನಲ್ಲಿ ಚೇತನ್ ರಕ್ತ ವಾಂತಿ ಮಾಡಿಕೊಂಡು ಮಲಗಿದ್ದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ.

ತಕ್ಷಣ ದರ್ಶನ್-ಮಿಥುನ್‌ಗೆ ಗೌತಮ್ ಫೋನ್ ಮಾಡಿದ್ದಾರೆ. ಆ ಸುದ್ದಿ ತಿಳಿಯುತ್ತಿದ್ದಂತೆ ಅವರಿಬ್ಬರ ಮೊಬೈಲ್‌ ಸ್ವಿಚ್ ಆಫ್ ಆಗಿದೆ. ಪೊಲೀಸರಿಗೆ ಮಾಹಿತಿ ತಿಳಿದು ಮೃತದೇಹವನ್ನು ತೆರವುಗೊಳಿಸಿದ್ದಾರೆ. ಚೇತನ್ ಪೋಷಕರು ಕೊಲೆ ಆರೋಪ ಮಾಡಿದ್ದು, ಬೇಲೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.