ದೆಹಲಿ ಮೆಟ್ರೋದಲ್ಲಿ ಪ್ರೇಮಿಗಳಿಬ್ಬರ ಲಿಪ್ ಲಾಕ್: ವೀಡಿಯೋ ಸೆರೆಹಿಡಿದವನ ತರಾಟೆಗೆ ತೆಗೆದುಕೊಂಡ ನೆಟ್ಟಿಗರು, ಪರ-ವಿರೋಧ ಚರ್ಚೆ




ನವದೆಹಲಿ: ದೆಹಲಿ ಮೆಟ್ರೋ ಈಗ ಅಸಭ್ಯತೆಯ ಕುರಿತು ಭಾರೀ ಚರ್ಚೆಯಲ್ಲಿದೆ. ಕೆಲದಿನಗಳ ಹಿಂದೆ ಯುವತಿಯೊಬ್ಬಳು ಅರೆಬೆತ್ತಲೆಯಾಗಿ ಮೆಟ್ರೋದಲ್ಲಿ ಪ್ರಯಾಣಿಸಿರುವ ವೀಡಿಯೋ ಭಾರೀ ಸದ್ದು ಮಾಡಿತ್ತು. ಇದೀಗ ಪ್ರೇಮಿಗಳಿಬ್ಬರು ಮೆಟ್ರೋ ರೈಲಿನಲ್ಲೇ ತಬ್ಬಿಕೊಂಡು ಲಿಪ್‌ಲಾಕ್ ಮಾಡಿರುವ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ.

ಪಂಜಾಬ್ ಮೂಲದ ರಿದಮ್ ಚಾನನ ಎಂಬಾಕೆ ಮೆಟ್ರೋದಲ್ಲಿ ಬ್ರಾ ಹಾಗೂ ಬಿಕಿನಿಯಂತಹ ಮಿನಿ ಸ್ಕರ್ಟ್‌ನಲ್ಲಿ ಕಾಣಿಸಿಕೊಂಡಿದ್ದಳು. ಇದಕ್ಕೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಳಿಕ ಪರ-ವಿರೋಧದ ಚರ್ಚೆಯಾಗಿತ್ತು. ಸಾರ್ವಜನಿಕ ಪ್ರದೇಶದಲ್ಲಿ, ಮೆಟ್ರೋ ಒಳಗೆ ಸಭ್ಯತೆಯಿಂದ ವರ್ತಿಸಬೇಕೆಂದು ದೆಹಲಿ ಮೆಟ್ರೋ ಖಡಕ್ಕಾಗಿ ಸೂಚನೆ ನೀಡಿತ್ತು. ಆದರೆ ಇದೀಗ ಪ್ರೇಮಿಗಳಿಬ್ಬರು, ಮೆಟ್ರೋ ಸೂಚನೆಗೆ ಕ್ಯಾರೆ ಎನ್ನದೆ ರೈಲಿನ ಒಳಗಡೆಯೇ ಲಿಪ್‌ಲಾಕ್ ಮಾಡಿದ್ದಾರೆ. ಅನೇಕ ನೆಟ್ಟಿಗರು ಇದನ್ನು “ನಾಚಿಕೆಗೇಡಿನ ಕೃತ್ಯ” ಎಂದು ಕರೆದರೆ, ಕೆಲವರು ಇದನ್ನು ಸಾಮಾನ್ಯಗೊಳಿಸಬೇಕು ಎಂದು ವಾದಿಸಿದ್ದಾರೆ.

ರಿಚಾ ಶರ್ಮಾ ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಮೆಟ್ರೋ ಪ್ರಯಾಣಿಕರಾದ ಯುವಕ ಮತ್ತು ಯುವತಿ ಪ್ರಯಾಣಿಕರು ತುಂಬಿರುವ ಚಲಿಸುವ ಮೆಟ್ರೋ ರೈಲಿನ ಒಳಗೆ ನಿಂತು ಪರಸ್ಪರ ತಬ್ಬಿಕೊಂಡು ಚುಂಬಿಸುತ್ತಿರುವ ದೃಶ್ಯ ಈ ವೀಡಿಯೋದಲ್ಲಿದೆ. ಸಾರ್ವಜನಿಕವಾಗಿ ಚುಂಬಿಸಿದ್ದಕ್ಕಾಗಿ ಕೆಲವು ನೆಟ್ಟಿಗರು ಪ್ರೇಮಿಗಳಿಬ್ಬರನ್ನು ಟೀಕಿಸಿದ್ದಾರೆ. ಆದರೆ, ಹೆಚ್ಚಿನ ನೆಟ್ಟಿಗರು ಅನುಮತಿಯಿಲ್ಲದೆ ವಿಡಿಯೋ ರೆಕಾರ್ಡ್ ಮಾಡಿದ ವ್ಯಕ್ತಿಯನ್ನು ಖಂಡಿಸಿದ್ದಾರೆ. ಪ್ರೀತಿಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವುದನ್ನು ಸಾಮಾನ್ಯಗೊಳಿಸಬೇಕು ಎಂದು ಅನೇಕ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯಾರದ್ದೇ ಒಪ್ಪಿಗೆಯಿಲ್ಲದೆ ವೀಡಿಯೋ ಚಿತ್ರೀಕರಿಸುವುದು ಅಥವಾ ಅದರ ವಿಡಿಯೋವನ್ನು ಪೋಸ್ಟ್ ಮಾಡುವುದು ಐಪಿಸಿ ಸೆಕ್ಷನ್ 354 Cಯಡಿಯಲ್ಲಿ ಶಿಕ್ಷಾರ್ಹವಾಗಿದೆ ಎಂದು ಕೆಲ ನೆಟ್ಟಿಗರು ತಿಳಿಸಿದ್ದಾರೆ. ಆದರೆ ಕೆಲವರು, ಸಾರ್ವಜನಿಕ ಪ್ರದೇಶದಲ್ಲಿ ಸಭ್ಯತೆಯಿಂದ ನಡೆದುಕೊಳ್ಳುವುದು ಅಷ್ಟೇ ಸರಿ ಎಂದು ವಾದಿಸಿದ್ದಾರೆ.

ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ ಪ್ರಯಾಣಿಕರು ಸಮಾಜದಲ್ಲಿ ಸ್ವೀಕಾರಾರ್ಹವಾದ ಎಲ್ಲ ಸಾಮಾಜಿಕ ಶಿಷ್ಟಾಚಾರ ಮತ್ತು ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕೆಂದು ನಿರೀಕ್ಷಿಸುತ್ತದೆ. ಪ್ರಯಾಣಿಕರು ಯಾವುದೇ ಅಸಭ್ಯ ಚಟುವಟಿಕೆಯಲ್ಲಿ ತೊಡಗಬಾರದು ಅಥವಾ ಇತರ ಪ್ರಯಾಣಿಕರ ಸಂವೇದನೆಗೆ ಧಕ್ಕೆ ತರುವಂತಹ ಯಾವುದೇ ಉಡುಗೆಯನ್ನು ಧರಿಸಬಾರದು. ಮೆಟ್ರೋದಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಪ್ರಯಾಣಿಸುವಾಗ ಸಭ್ಯತೆಯಿಂದ ನಡೆದುಕೊಳ್ಳಲು ಎಲ್ಲ ಪ್ರಯಾಣಿಕರಿಗೆ ನಾವು ಮನವಿ ಮಾಡುತ್ತೇವೆ ಎಂದು ಹೇಳಿತ್ತು. ಆದರೆ ಮತ್ತೊಮ್ಮೆ ಈ ಘಟನೆ ನಡೆದಿರುವುದು ಡಿಎಂಆರ್ ಸಿ ಸೂಚನೆಗೆ ಬೆಲೆ ಇಲ್ಲದಂತಾಗಿದೆ.