ಮತ್ತೊಬ್ಬರ ಚಿನ್ನ ಅಡವಿಟ್ಟ ಸಾಲ ತೀರಿಸಲಾಗದ ಒತ್ತಡ- ಮರ್ಯಾದೆಗೆ ಅಂಜಿ ದಂಪತಿ ಸಾವಿಗೆ ಶರಣು
Wednesday, October 8, 2025
ಕಾಸರಗೋಡು: ಮಂಜೇಶ್ವರ ಠಾಣೆ ವ್ಯಾಪ್ತಿಯ ಕಡಂಬಾರ್ ಎಂಬಲ್ಲಿ ಕೀಟನಾಶಕ ಸೇವಿಸಿ ದಂಪತಿ ತಮ್ಮ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಕಡಂಬಾರು ನಿವಾಸಿಗಳಾದ ಅಜಿತ್ (35) ಮತ್ತು ಶ್ವೇತಾ (27) ದಂಪತಿ ಮೃತಪಟ್ಟವರು.
ಅಜಿತ್ ಪೈಂಟ್ ವೃತ್ತಿಯವರಾಗಿದ್ದು, ಶ್ವೇತಾ ವರ್ಕಾಡಿ ಬೇಕರಿ ಜಂಕ್ಷನ್‌ನಲ್ಲಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಸೋಮವಾರ ಸಂಜೆ ವೇಳೆಗೆ ಈ ಘಟನೆ ನಡೆದಿದೆ. ಗಂಭೀರ ಸ್ಥಿತಿಯಲ್ಲಿದ್ದ ಇವರನ್ನು ಉಪ್ಪಳ ಆಸ್ಪತ್ರೆಗೆ ಕರೆದೊಯ್ದ ಬಳಿಕ ದೇರಳಕಟ್ಟೆಯ ಕೆಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಜಿತ್ ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ಮೃತಪಟ್ಟಿದ್ದರೆ, ಶ್ವೇತಾ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಆತ್ಮಹತ್ಯೆಗೆ ಮುನ್ನ ತಮ್ಮ ಮೂರು ವರ್ಷದ ಮಗುವನ್ನು ಸೋಮವಾರ ಬೆಳಗ್ಗೆ ಅಜಿತ್ ಪತ್ನಿಯ ಸಹೋದರಿಯ ಮನೆಗೆ ಹೋಗಿ ಬಿಟ್ಟಿದ್ದರು. "ನಾವು ಹೊರಗೆ ಹೋಗುತ್ತಿದ್ದೇವೆ, ಮಗುವನ್ನು ನೋಡಿಕೊಳ್ಳಿ" ಎಂದು ಹೇಳಿ ಮರಳಿದ್ದರು. ಬಳಿಕ ಪತ್ನಿಯೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆ ವೇಳೆ ಮನೆಯ ವರಾಂಡಾದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದ ಇಬ್ಬರನ್ನು ನೆರೆಮನೆಯವರು ಆಸ್ಪತ್ರೆಗೆ ದಾಖಲಿಸಿದ್ದರು. ಮಂಜೇಶ್ವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಸ್ಥಳೀಯರ ಮಾಹಿತಿ ಪ್ರಕಾರ, ದಂಪತಿ ಬೇರೊಬ್ಬ ಮಹಿಳೆಯ ಚಿನ್ನವನ್ನು ಪಡೆದು ಅಡವಿಟ್ಟಿದ್ದರಂತೆ. ಅದನ್ನು ಮರಳಿಸದೇ ಇದ್ದುದರಿಂದ ಚಿನ್ನವನ್ನು ಮರಳಿಸುವಂತೆ ಒತ್ತಡ ಹೇರಿದ್ದರು. ಮನೆಗೆ ಬಂದು ಕೇಳಿದ್ದರಿಂದ ಮರ್ಯಾದೆಗೆ ಅಂಜಿ ದಂಪತಿ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ.