ಈತನ ಸುಳಿವು ನೀಡಿದ್ರೆ ಎನ್ಐಎ 5ಲಕ್ಷ ಬಹುಮಾನ ಘೋಷಣೆ



ಬೆಂಗಳೂರು:  ಹಿಂದೂ ಸಂಘಟನೆಯ ಕಾರ್ಯಕರ್ತ ರುದ್ರೇಶ್ ಹತ್ಯೆಯ ಪ್ರಮುಖ ಆರೋಪಿ ತಲೆಮರೆಸಿಕೊಂಡ ಮೊಹಮ್ಮದ್ ಗೌಸ್ ನಯಾಝೀ (41) ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಘೋಷಿಸಿದೆ.

ಮೊಹಮ್ಮದ್ ಗೌಸ್ ನಯಾಝೀಗಾಗಿ ಎನ್‌ಐಎ ತಂಡ 
 ತೀವ್ರ ಹುಡುಕಾಟ ನಡೆಸುತ್ತಿದೆ. ಇದೀಗ ಈತನ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ. 2016ರ ಅ.16ರಂದು ಬೆಳಗ್ಗೆ 9ಕ್ಕೆ ಶಿವಾಜಿನಗರದ ಕಾಮರಾಜ ರಸ್ತೆಯ ಶ್ರೀನಿವಾಸ ಮೆಡಿಕಲ್ ಸ್ಟೋರ್ ಮುಂಭಾಗ ರುದ್ರೇಶ್ ಸ್ನೇಹಿತರೊಂದಿಗೆ ನಿಂತಿದ್ದರು. ಈ ವೇಳೆ 2 ಬೈಕ್‌ಗಳಲ್ಲಿ ಬಂದಿದ್ದ ನಾಲ್ವರು ಹಂತಕರು ಮಾರಕಾಸ್ತ್ರಗಳಿಂದ ಕಡಿದು ಅವರನ್ನು ಹತ್ಯೆ ಮಾಡಿದ್ದರು.

ಈ ಪ್ರಕರಣದ ಪ್ರಮುಖ ಆರೋಪಿ ಬೆಂಗಳೂರಿನ ಆರ್‌ಟಿ ನಗರದ ಎರಡನೇ ಬ್ಲಾಕ್ ನಿವಾಸಿ ಮೊಹಮ್ಮದ್ ಗೌಸ್ ನಯಾಝೀ ಎಂಬಾತನಿಗೆ ಹಲವು ವರ್ಷಗಳಿಂದ ಎನ್‌ಐಎ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಆದರೆ ಇದುವರೆಗೂ ಆತನ ಸುಳಿವೂ ದೊರಕಿಲ್ಲವೆಂದು ತಿಳಿದು ಬಂದಿದೆ.

ಆದ್ದರಿಂದ ಮೊಹಮ್ಮದ್ ಗೌಸ್ ನಯಾಝೀ ಬಗ್ಗೆ ಮಾಹಿತಿ ನೀಡಿದವರಿಗೆ 5ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‌ಐಎ ಘೋಷಿಸಿದೆ. ಆತನ ಸುಳಿವು ಸಿಕ್ಕಿದರೆ ಎನ್‌ಐಎ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ಈ ಹಿಂದೆ ಆತ ಪಿಎಫ್‌ಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಎಂದು ತಿಳಿದು ಬಂದಿದೆ. ಇನ್ನು ಈ ಪ್ರಕರಣದಲ್ಲಿ ಶಾಮೀಲಾಗಿದ್ದರು ಎನ್ನಲಾದ ಆರೋಪಿಗಳೆಲ್ಲರೂ ಜೈಲಿನಲ್ಲಿದ್ದಾರೆ. ಆದರೆ, ಮೊಹಮ್ಮದ್ ಗೌಸ್ ಇನ್ನೂ ತಲೆಮರೆಸಿಕೊಂಡಿದ್ದು, ಆತ ಇಂತಹ ಹಲವು ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.