ಬೆಂಗಳೂರು: ಸ್ನೇಹಿತರೊಂದಿಗೆ ಸೆಕ್ಸ್ ಮಾಡಲು ಒತ್ತಾಯ; ಪತಿಯ ವಿರುದ್ಧ ಪತ್ನಿ ದೂರು


ಬೆಂಗಳೂರು: ಸ್ನೇಹಿತರೊಂದಿಗೆ ಲೈಂಗಿಕ ಸಂಪರ್ಕ ಮಾಡುತೆ ಬಲವಂತಪಡಿಸಿ, ಸೆಕ್ಸ್ ವೀಡಿಯೊಗಳನ್ನು ಇರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆಂದು ಆರೋಪಿಸಿ ಎಂದು 34 ವರ್ಷ ವಯಸ್ಸಿನ ಸಾಫ್ಟ್‌ವೇರ್ ಇಂಜಿನಿಯರ್ ತಮ್ಮ ಪತಿ ವಿರುದ್ಧವೇ ಠಾಣೆಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಥಣಿಸಂದ್ರ ಮುಖ್ಯರಸ್ತೆಯ ಸಂಪಿಗೆಹಳ್ಳಿಯಲ್ಲಿ ಈ ಸಾಫ್ಟ್‌ವೇರ್ ಇಂಜಿನಿಯರ್ ತಮ್ಮ ಪತಿಯೊಂದಿಗೆ ವಾಸಿಸುತ್ತಿದ್ದರು. ಆದರೆ ಆತ ಬೇರೆ ವ್ಯಕ್ತಿಗಳೊಂದಿಗೆ ಲೈಂಗಿಕತೆ ನಡೆಸುವಂತೆ ಒತ್ತಾಯಪಡಿಸುತ್ತಿದ್ದ. ಅದಕ್ಕೆ ಒಪ್ಪದಿದ್ದರೆ ಪತಿ ಹಲ್ಲೆ ನಡೆಸುತ್ತಿದ್ದರು ಎಂದು ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಪೊಲೀಸರು 36 ವರ್ಷ ವಯಸ್ಸಿನ ಟೆಕ್ಕಿ ಪತಿಯನ್ನು ಬಂಧಿಸಿದ್ದಾರೆ.

ಪತಿಯು ತನ್ನ ಇಬ್ಬರು ಸ್ನೇಹಿತರೊಂದಿಗೆ ಬಲವಂತವಾಗಿ ಲೈಂಗಿಕತೆ ನಡೆಸುವಂತೆ ತಳ್ಳಿದ್ದಾನೆ. ಅಲ್ಲದೆ ಈ ಕೃತ್ಯವನ್ನು ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ. ತಾನು ಆತನಿಗೆ ವಿಚ್ಛೇದನ ಕೇಳಿದಾಗಲೆಲ್ಲಾ ಈ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಪತ್ನಿ ದೂರಿನಲ್ಲಿ ವಿವರಿಸಿದ್ದಾರೆ.

ಈ ದಂಪತಿ 2011ರಲ್ಲಿ ವಿವಾಹವಾಗಿದ್ದು ಓರ್ವ ಪುತ್ರನಿದ್ದಾನೆ. ಆರೋಪಿ ಟೆಕ್ಕಿ ಆಲ್ಕೋಹಾಲ್ ಹಾಗೂ ಮಾದಕ ವಸ್ತುಗಳ ವ್ಯಸನಿಯಾಗಿದ್ದಾನೆ. ಅಲ್ಲದೆ ಆತ ಪತ್ನಿಯ ಸಹೋದರಿಯೊಂದಿಗೂ ಸೆಕ್ಸ್ ಮಾಡಲು ಬಲವಂತಪಡಿಸಿದ್ದ ಎಂದೂ ಸಂಪಿಗೆಹಳ್ಳಿ ಠಾಣೆಯಲ್ಲಿ ದಾಖಲಿಸಿದ ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಗಾಂಜಾ ವ್ಯಸನಿಯಾಗಿರುವ ಪತಿ ಮನೆಯಲ್ಲಿ ಹೂಗಿಡಗಳ ಪಾಟ್‌ನಲ್ಲಿ ಗಾಂಜಾ ಬೆಳೆದಿದ್ದಾನೆ ಎಂದೂ ಆರೋಪಿಸಲಾಗಿದೆ. ಪೊಲೀಸರು ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.