-->
ಬ್ರೇಕಪ್ ಮಾಡಿಕೊಂಡ ಸೇಡು: ಮಾಜಿ ಪ್ರೇಯಸಿಯನ್ನು ಅಪಹರಿಸಿ ಗಲ್ಲದ ಮೇಲೆ ತನ್ನ ಹೆಸರಿನ ಟ್ಯಾಟೂ ಬಿಡಿಸಿ ಮನೋವಿಕೃತಿ ಮೆರೆದ ಪ್ರೇಮಿ!

ಬ್ರೇಕಪ್ ಮಾಡಿಕೊಂಡ ಸೇಡು: ಮಾಜಿ ಪ್ರೇಯಸಿಯನ್ನು ಅಪಹರಿಸಿ ಗಲ್ಲದ ಮೇಲೆ ತನ್ನ ಹೆಸರಿನ ಟ್ಯಾಟೂ ಬಿಡಿಸಿ ಮನೋವಿಕೃತಿ ಮೆರೆದ ಪ್ರೇಮಿ!

ಬ್ರೆಸಿಲಿಯಾ(ಬ್ರೆಜಿಲ್)​: ಬ್ರೇಕಪ್​ ಮಾಡಿಕೊಂಡಿರೋದಕ್ಕೆ ಸೇಡು ತೀರಿಸಿಕೊಳ್ಳಲು ಯುವಕನೋರ್ವನು ಮಾಜಿ ಪ್ರಿಯತಮೆಯನ್ನು ಅಪಹರಿಸಿ ಆಕೆಯ ಮುಖದ ಮೇಲೆಯೇ ತನ್ನ ಹೆಸರನ್ನು ದೊಡ್ಡ ಅಕ್ಷರಗಳಲ್ಲಿ ಟ್ಯಾಟೂ ಹಾಕಿ ಮನೋವಿಕೃತಿ ಮೆರೆದಿರುವ ಘಟನೆ ಬ್ರೆಜಿಲ್​ನಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕೃತಿ ಮೆರೆದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಬ್ರೆಜಿಲ್‌ನ ಸಾವೊ ಪೌಲೊ ನಿವಾಸಿ ತಯಾನೆ ಕಾಲ್ಡಾಸ್ (18) ಹಾಗೂ ಗೇಬ್ರಿಯಲ್ ಕೊಯೆಲ್ಹೋ (20) 2019 ರಿಂದ ಒಬ್ಬರಿಗೊಬ್ಬರು ಪರಿಚಿತರಾಗಿದ್ದರು. ಅಲ್ಲದೇ, ಡೇಟಿಂಗ್​ ಕೂಡ ನಡೆಸುತ್ತಿದ್ದರು. ಆ ಬಳಿಕ ಇಬ್ಬರ ಮಧ್ಯೆಯೂ ಮನಸ್ತಾಪ ಉಂಟಾಗಿ ಇಬ್ಬರೂ ದೂರವಾಗಿದ್ದರು. ಆದರೆ, ಪಾಗಲ್​ಪ್ರೇಮಿ ಗೇಬ್ರಿಯಲ್​ ಕೊಯೆಲ್ಲೊ ತನ್ನ ಮಾಜಿ ಪ್ರೇಯಸಿ ತಯಾನೆ ಕಾಲ್ಡಾಸ್ ನನ್ನು ಬಿಟ್ಟು ಬಿಡಲು ಒಪ್ಪಲಿಲ್ಲ. ಆದ್ದರಿಂದ ಆಗಾಗ ಕಾಲೇಜಿಗೆ ಬಂದು ಕಿರುಕುಳ ನೀಡುತ್ತಿದ್ದನಂತೆ. 

ಕೆಲ ದಿನಗಳ ಹಿಂದೆ ತಯಾನೆಯನ್ನು ಅಪಹರಿಸಿರುವ ಗೇಬ್ರಿಯಲ್​ ಆಕೆಯನ್ನು ತನ್ನ ಮನೆಗೆ ಹೊತ್ತೊಯ್ದು ಮುಖದ ಮೇಲೆ ಕಾಣಿಸುವಂತೆ ದೊಡ್ಡದಾಗಿ ತನ್ನ ಹೆಸರನ್ನು ಟ್ಯಾಟೂ(ಹಚ್ಚೆ) ಹಾಕಿದ್ದಾನೆ. ಟ್ಯಾಟೂ ಕಲಾವಿದನಾಗಿದ್ದ ಗೇಬ್ರಿಯಲ್​ ತನ್ನೊಂದಿಗೆ ಬ್ರೇಕಪ್​ ಮಾಡಿಕೊಂಡಿರುವುದಕ್ಕೆ ಸೇಡು ತೀರಿಸಿಕೊಳ್ಳಲು ಈ ಉಪಾಯವನ್ನು ಹುಡುಕಿದ್ದಾನೆ. ಮರುದಿನ ತಯಾನಾ ತಾಯಿ ಪುತ್ರಿ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. 

ಪೊಲೀಸರು ಗೇಬ್ರಿಯಲ್​ ಮನೆಯಲ್ಲಿ ತಯಾನೆಯನ್ನು ಪತ್ತೆ ಮಾಡಿ ಕರೆದೊಯ್ದಿದ್ದಾರೆ. ಗೇಬ್ರಿಯಲ್​ನ ಹುಚ್ಚಾಟದಿಂದ ತಯಾನೆ ಅತಿಯಾಗಿ ಭಯಗೊಂಡಿದ್ದಳಂತೆ. ಅಲ್ಲದೆ ಗಲ್ಲದಲ್ಲಿ ದೊಡ್ಡದಾಗಿ ಟ್ಯಾಟೂ ಹಾಕಿರೋದ್ದಕ್ಕೆ ನೊಂದುಕೊಂಡಿದ್ದಾಳೆ. ತನ್ನನ್ನು ಬಲವಂತವಾಗಿ ಅಪಹರಿಸಿ ಮನೆಗೆ ಕರೆದೊಯ್ದು ಆತ ನನ್ನ ಮುಖವನ್ನು ವಿಕಾರ ಮಾಡಿದ್ದಾನೆ ಎಂದು ಆಕೆ ದೂರಿದ್ದಾಳೆ. ಆದರೆ, ಈಕೆಯ ಅಪವಾದವನ್ನು ಗೇಬ್ರಿಯಲ್​ನ ಮನೆಯವರು ತಳ್ಳಿಹಾಕಿದ್ದಾರೆ. ತಯಾನೆಯೇ ಇಷ್ಟಪಟ್ಟು ಈ ಟ್ಯಾಟೂ ಹಾಕಿಸಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ.

ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಯುವತಿಯ ಬಗ್ಗೆ ನೆಟ್ಟಿಗರಿಂದ ಕನಿಕರ ವ್ಯಕ್ತವಾಗಿದೆ. ಅಲ್ಲದೇ ಹಲವಾರು ಟ್ಯಾಟೂ ಕಲಾವಿದರು ಆಕೆಯ ಮುಖದ ಮೇಲಿನ ಟ್ಯಾಟೂವನ್ನು ಲೇಸರ್​ನಿಂದ ಅಳಿಸಿ ಹಾಕುವುದಾಗಿ ಹೇಳಿದ್ದಾರೆ. ಇದೀಗ ಯುವತಿಯ ಮುಖದ ಮೇಲಿನ ಟ್ಯಾಟೂವನ್ನು ಲೇಸರ್​ ಚಿಕಿತ್ಸೆಯಿಂದ ಅಳಿಸಿ ಹಾಕಲಾಗಿದೆ. ಇದಲ್ಲದೇ, ಪ್ರಿಯಕರನ ಹೆಸರಲ್ಲಿದ್ದ ಇನ್ನೆರಡು ಟ್ಯಾಟೂವನ್ನು ಕೂಡ ಅಳಿಸಲಾಗಿದೆ. ತನ್ನ ಮುಖವನ್ನು ವಿಕಾರ ಮಾಡಿದ್ದಕ್ಕೆ ಮಾಜಿ ಪ್ರಿಯಕರನಿಗೆ ಕಠಿಣ ಶಿಕ್ಷೆಯಾಗಬೇಕೆಂದು ತಯಾನೆ ಒತ್ತಾಯಿಸಿದ್ದಾಳೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article