commissioner on Muthalik issue - ಮುತಾಲಿಕ್‌ಗೆ ರಾಜಾತಿಥ್ಯ: ನಡೆದದ್ದೇನು ಎಂದು ಸ್ಪಷ್ಪನೆ ನೀಡಿದ ಪೊಲೀಸ್‌ ಆಯುಕ್ತ

ಮುತಾಲಿಕ್‌ಗೆ ರಾಜಾತಿಥ್ಯ: ನಡೆದದ್ದೇನು ಎಂದು ಸ್ಪಷ್ಪನೆ ನೀಡಿದ ಪೊಲೀಸ್‌ ಆಯುಕ್ತ





ಬಜಪೆ ಪೊಲೀಸ್ ಠಾಣೆ ವ್ಯಾಪ್ತಿಯ ಮಸೀದಿಗೆ ಭೇಟಿ ನೀಡಲಿದ್ದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಅವರಿಗೆ ಮಂಗಳೂರು ನಗರ ಪೊಲೀಸ್‌ ಆಯುಕ್ತರು ತಮ್ಮ ಕಚೇರಿಯಲ್ಲಿ ರಾಜಾತಿಥ್ಯ ನೀಡಿದ್ದರು ಎಂದು ಭಾರೀ ಸುದ್ದಿಯಾಗಿತ್ತು. ಆದರೆ, ಈ ಘಟನೆಯ ನೈಜತೆ ಬಗ್ಗೆ ಸ್ವತಃ ಪೊಲೀಸ್‌ ಆಯುಕ್ತ ಎನ್. ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.



ಪ್ರಮೋದ್‌ ಮುತಾಲಿಕ್‌ ಮಂಗಳೂರು ಭೇಟಿಯ ವೇಳೆ ಬಜ್ಪೆ ಪೊಲೀಸ್‌ ಠಾಣಾ ವ್ಯಾಪ್ತಿಯ ಮಳಲಿ ಮಸೀದಿಗೆ ಭೇಟಿ ನೀಡಲಿದ್ದರು. ಅದು ವಿವಾದದ ಕೇಂದ್ರ ಬಿಂದುವಾಗಿತ್ತು. ಮುತಾಲಿಕ್‌ ಮತ್ತು ಸಹಚರರು ಭೇಟಿ ಮಾಡುವ ಬಗ್ಗೆ ಪೊಲೀಸರಿಗೂ ಮಾಹಿತಿ ಲಭ್ಯವಾಗಿತ್ತು. ಅಲ್ಲಿ ಯಾವುದೇ ಸಂಘರ್ಷ ಉಂಟಾಗದಂತೆ ತಡೆಯಲು ಪೊಲೀಸರು ಸೂಕ್ತ ಬಂದೋಬಸ್ತ್ ಮಾಡಿದ್ದರು.



ಈ ಸಂದರ್ಭದಲ್ಲೇ ನಗರದ ಕಮಿಷನರ್‌ ಕಚೇರಿಗೆ ಮುತಾಲಿಕ್‌ ಭೇಟಿ ನೀಡಿದ್ದು, ಮಸೀದಿಯ ಪ್ರದೇಶಕ್ಕೆ ಭೇಟಿ ನೀಡಲು ಅವಕಾಶ ಕೇಳಿದರು. ಅದಕ್ಕೆ ಪೊಲೀಸ್ ಆಯುಕ್ತರು ನಿರಾಕರಿಸಿದ್ದರು. ಈ ಭೇಟಿ ನಂತರ, ಎಂದಿನಂತೆ ಊಟಕ್ಕೆ ಹೊರಡಲು ಅನುವಾದಾಗ ತೆಗೆದ ಫೋಟೋ ಅದು. ಆ ಫೋಟೋ ಇಟ್ಟುಕೊಂಡು ಕೆಲ ನಿರ್ದಿಷ್ಟ ಸಂಘಟನೆ ಮತ್ತು ಪಕ್ಷದವರು ತಮ್ಮ ರಾಜಕೀಯ ಬೇಳೆ ಬೇಯಿಸುತ್ತಿದ್ದಾರೆ ಎಂದು ಅವರು ಪರೋಕ್ಷವಾಗಿ ನುಡಿದರು.



ಇದೊಂದು ಸಾಂಧರ್ಬಿಕ ಚಿತ್ರ. ಅದನ್ನು ತಪ್ಪಾಗಿ ಬಿಂಬಿಸಿರುವುದು ಸರಿಯಲ್ಲ. ಯಾರು ಇದನ್ನು ವೈರಲ್‌ ಮಾಡಿದ್ದಾರೋ ಅವರ ಪಕ್ಷದ ಪ್ರತಿನಿಧಿಗಳ ಮೇಲೂ ಸಾಕಷ್ಟು ಪ್ರಕರಣ ಇದ್ದರೂ ಪಕ್ಷದ ನೆಲೆಯಲ್ಲಿ ಗುರುತಿಸುವ ವೇಳೆ ಅವರಿಗೆ ಗೌರವ ಕೊಟ್ಟಿದ್ದೇವೆ ಎಂದು ಶಶಿಕುಮಾರ್ ಸ್ಪಷ್ಟಪಡಿಸಿದರು.