
ಮಂಗಳೂರು: ಮೀನು ಸಂಸ್ಕರಣಾ ಘಟಕದಲ್ಲಿ ದುರಂತ; ಡಿವೈಎಫ್ಐ, ಸಿಐಟಿಯು ಮಧ್ಯಪ್ರವೇಶದಿಂದ ಮೃತಪಟ್ಟವರ ಪ್ರತೀ ಕುಟುಂಬಕ್ಕೆ ತಲಾ 15 ಲಕ್ಷ ರೂ. ಪರಿಹಾರ ಕೊಡಲು ಸಮ್ಮತಿಸಿದ ಕಂಪೆನಿ
4/18/2022 07:59:00 PM
ಮಂಗಳೂರು: ನಗರದ ಬಜ್ಪೆಯಲ್ಲಿರುವ ಎಸ್ಇಝಡ್ ವ್ಯಾಪ್ತಿಯ ಶ್ರೀ ಉಲ್ಕಾ ಮೀನು ಸಂಸ್ಕರಣಾ ಘಟಕದಲ್ಲಿ ನಡೆದಿರುವ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಕಂಪೆನಿಯು ಪರಿಹಾರ ನೀಡಬೇಕು. ಅಲ್ಲಿಯವರೆಗೆ ಮೃತದೇಹವನ್ನು ಅವರ ತಾಯ್ನಾಡಿಗೆ ಕಳುಹಿಸಿಕೊಡಲು ಸಮ್ಮತಿ ನೀಡುವುದಿಲ್ಲ ಎಂದು ಡಿವೈಎಫ್ಐ, ಸಿಐಟಿಯು ನಾಯಕರು ಕಂಪೆನಿಯ ಮಾಲಕರ ಮುಂದೆ ಬೇಡಿಕೆ ಮುಂದಿಟ್ಟಿದ್ದರು. ಹಲವು ಹಂತಗಳ ಮಾತುಕತೆಯ ಬಳಿಕ ಕಂಪೆನಿಯು ಪ್ರತಿಯೊಂದು ಕುಟುಂಬಕ್ಕೆ ತಲಾ 15 ಲಕ್ಷ ರೂ. ಪರಿಹಾರ ನೀಡಲು ಒಪ್ಪಿಗೆ ಸೂಚಿಸಿದೆ. ಈ ಹಣವನ್ನು ಹದಿನೈದು ದಿನಗಳಲ್ಲಿ ಕುಟುಂಬದ ಬ್ಯಾಂಕ್ ಖಾತೆಗೆ ವರ್ಗಾಯಿಸುವುದಾಗಿ ಲಿಖಿತವಾಗಿ ಕುಟುಂಬದ ಸದಸ್ಯರಿಗೆ ಪತ್ರ ನೀಡಿದೆ.
ಮಾತುಕತೆಯ ಸಂದರ್ಭ ಮೃತಪಟ್ಟ ಕುಟುಂಬ ಸದಸ್ಯರೊಂದಿಗೆ ಸಿಐಟಿಯು ಮುಖಂಡ ಸುನಿಲ್ ಕುಮಾರ್ ಬಜಾಲ್, ಡಿವೈಎಫ್ಐ ನಾಯಕರಾದ ಮುನೀರ್ ಕಾಟಿಪಳ್ಳ, ಸಂತೋಷ್ ಬಜಾಲ್, ಬಿ.ಕೆ. ಇಮ್ತಿಯಾಝ್, ಮನೋಜ್ ಉರ್ವಸ್ಟೋರ್, ಪ್ರಶಾಂತ್ ಎಂ.ಬಿ., ಬಜ್ಪೆ ಗ್ರಾಪಂ ಮಾಜಿ ಅಧ್ಯಕ್ಷ ಶಾಹುಲ್ ಹಮೀದ್, ಸಾಲಿ ಮರವೂರು ಮತ್ತಿತರರು ಉಪಸ್ಥಿತರಿದ್ದರು.
ಪಶ್ಚಿಮ ಬಂಗಾಳ ಸರಕಾರ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಧನ ಘೋಷಿಸಿದೆ. ಆದ್ದರಿಂದ ಕರ್ನಾಟಕ ಸರಕಾರ ತಲಾ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸಂಘಟನೆಗಳು ಆಗ್ರಹಿಸುತ್ತಿವೆ. ಇಷ್ಟು ದೊಡ್ಡ ದುರಂತ ಸಂಭವಿಸಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಕನಿಷ್ಠ ಪಕ್ಷ ಸ್ಥಳಕ್ಕೆ ಭೇಟಿಯನ್ನೂ ನೀಡದಿರುವುದು ದುರದೃಷ್ಟಕರ ಎಂದು ಡಿವೈಎಫ್ಐ, ಸಿಐಟಿಯು ಮುಖಂಡರು ಹೇಳಿದ್ದಾರೆ.