
ಮಲ್ಪೆ ಬಂದರ್ ನಲ್ಲಿ ಭಯಾನಕವಾದ ಬೃಹತ್ ಗಾತ್ರದ ಗರಗಸ ಮೀನು ಪತ್ತೆ!
Thursday, March 10, 2022
ಉಡುಪಿ: ಭಯಾನಕವೂ ಬೃಹತ್ ಗಾತ್ರದ ಅಪರೂಪದ ಮೀನೊಂದು ಮಲ್ಪೆ ಬಂದರಿನ ಬೋಟೊಂದರಲ್ಲಿ ಬೀಸಿದ ಬಲೆಗೆ ಬಿದ್ದಿದೆ.
ಬೃಹತ್ ಗಾತ್ರದ ಈ ಮೀನು ನೋಡಲೂ ಭಯಾನಕವಾಗಿದ್ದರಿಂದ ಕುತೂಹಲದಿಂದ ಸಾಕಷ್ಟು ಮಂದಿ ಬಂದರಿಗೆ ಆಗಮಿಸಿ ಮೀನನ್ನು ನೋಡಿದ್ದಾರೆ. ಮೀನು ಹಿಡಿಯಲೆಂದು ಆಳ ಸಮುದ್ರಕ್ಕೆ ತೆರಳಿದ್ದ 'ಸೀ ಕ್ಯಾಪ್ಟನ್' ಎಂಬ ಲೈಲ್ಯಾಂಡ್ ಬೋಟ್ ನ ಮೀನುಗಾರರು ಬೀಸಿರುವ ಬಲೆಗೆ ಭಾರಿ ಗಾತ್ರದ ಈ ಮೀನು ಸಿಕ್ಕಿದೆ.
ಮೀನುಗಾರಿಕೆ ನಡೆಸಿ ಮಲ್ಪೆ ಬಂದರಿಗೆ ಬಂದು ಬೋಟಿನಿಂದ ಮೀನುಗಳನ್ನು ಇಳಿಸುವ ವೇಳೆ ಬಲೆಯೊಳಗೆ ಬೃಹತ್ ಗಾತ್ರದ ಮೀನು ಪತ್ತೆಯಾಗಿದೆ. ಸ್ಥಳೀಯ ಭಾಷೆಯಲ್ಲಿ ಗರಗಸ ಮೀನು ಎಂಬ ಹೆಸರಿನಿಂದ ಕರೆಯಲಾಗುವ ಈ ಮೀನನ್ನು ಗರಗಸ ಶಾರ್ಕ್ ಎಂದೂ ಕರೆಯಲಾಗುತ್ತದೆ.
ಹತ್ತು ಅಡಿಗೂ ಅಧಿಕ ಉದ್ದವಿರುವ ಮೀನಿನ ಬಾಯಿಂದ ಗರಗಸ ಮಾದರಿಯ ಮೊನಚಾದ ಹಲ್ಲುಗಳು ಹೊರ ಬಂದಿವೆ. ಕ್ರೇನ್ ಮೂಲಕ ಎತ್ತಿ ಮೀನನ್ನು ಬೋಟ್ ನಿಂದ ಇಳಿಸಲಾಗಿದೆ. ಸದ್ಯ ಈ ಮೀನನ್ನು ವಿಲೇವಾರಿ ಮಾಡಲಾಗಿದೆ. ಅಪಾಯದ ಅಂಚಿನಲ್ಲಿರುವ ಈ ಮೀನನ್ನು, ವನ್ಯಜೀವಿ ಸಂರಕ್ಷಣಾ ಕಾಯ್ದೆ ನಿಯಮಗಳ ಅನುಸಾರ ಅನುಬಂಧ ೧ ರಲ್ಲಿ ಗುರುತಿಸಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.