-->

ಭಗ್ನ ಪ್ರೇಮಿ ವಿಷ ಸೇವಿಸಿ, ಚಾಕುವಿನಿಂದ ಇರಿಸಿಕೊಂಡರೂ ಬದುಕುಳಿದ: ಕಾನೂನು ಬದಲಾದರೂ ಐದು ವರ್ಷ ಜೈಲು ಪಾಲಾದ

ಭಗ್ನ ಪ್ರೇಮಿ ವಿಷ ಸೇವಿಸಿ, ಚಾಕುವಿನಿಂದ ಇರಿಸಿಕೊಂಡರೂ ಬದುಕುಳಿದ: ಕಾನೂನು ಬದಲಾದರೂ ಐದು ವರ್ಷ ಜೈಲು ಪಾಲಾದ

ಮುಂಬೈ: ಆತ್ಮಹತ್ಯೆಗೆ ಯತ್ನಿಸೋದು ಅದು ಅಪರಾಧ ಎಂಬ ಕಾನೂನು 2018ಕ್ಕಿಂತ ಮೊದಲಿಗಿತ್ತು. ಆದರೆ 2018ರಲ್ಲಿ ಕಾನೂನೊಂದನ್ನು ಜಾರಿಗೆ ತಂದು ಅದನ್ನು ರದ್ದುಗೊಳಿಸಲಾಗಿತ್ತು. ಆದರೆ 2018ಕ್ಕಿಂತಲೂ ಮೊದಲು ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪದ ಮೇಲೆ ಜೈಲು ಸೇರಿದ್ದ ಪ್ರೇಮಿಯೊಬ್ಬನ ವ್ಯಥೆಯ ಕಥೆಯ ಘಟನೆ ಇದು. ಅದೃಷ್ಟವೆನ್ನುವುದು ಕೈಕೊಟ್ಟಲ್ಲಿ ವ್ಯಕ್ತಿಯೊಬ್ಬನ ಬಾಳು ಯಾವ ರೀತಿ ಆಗಿಹೋಗುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಕೂಡಾ 

ಈ ಪ್ರಕರಣ ನಡೆದಿರುವುದು ಮುಂಬೈನಲ್ಲಿ. ಇಲ್ಲಿನ ಖಾರ್ ಪ್ರದೇಶದ ಯುವಕನೊಬ್ಬ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇವರಿಬ್ಬರದ್ದು ಕಾಲೇಜು ದಿನಗಳಿಂದಲೇ ಆರಂಭವಾದ ಪ್ರೇಮವಾಗಿತ್ತು. 2011 ರಿಂದ 2016 ರ ಮಧ್ಯೆ ಯುವಕ ಯುವತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇಷ್ಟು ಸುದೀರ್ಘ ಅವಧಿಯವರೆಗೆ ಯುವತಿಯನ್ನು ಪ್ರೀತಿಸಿದ್ದ ಈತ, ಕೊನೆಗೆ ಮದುವೆಯಾಗೋಣ ಎಂಬಂತೆ ಒತ್ತಾಯಿಸಿದ್ದ. ಆದರೆ ಅದಾಗಲೇ ಆತನ ಪ್ರೀತಿಯನ್ನು ತಿರಸ್ಕರಿಸಿದ ಯುವತಿ, ಯುವಕ ಪದೇ ಪದೇ ತನಗೆ ಹಿಂಸೆ ನೀಡುತ್ತಿದ್ದಾನೆ ಎಂದು ಪೊಲೀಸ್ ದೂರು ನೀಡಿದ್ದಳು.

ಇಷ್ಟಾಗುತ್ತಿದ್ದಂತೆಯೇ ಮನನೊಂದ ಯುವಕ 2017ರ ಮೇ 13ರಂದು ಯುವತಿಯ ಮನೆಯ ಮುಂದೆ ಹೋಗಿ ವಿಷ ಸೇವಿಸಿದ್ದಾನೆ. ಅದರಲ್ಲಿ ಮೃತಪಡದಿದ್ದಾಗ ಹೊಟ್ಟೆಗೆ ಚಾಕುವಿನಿಂದ ಇರಿದುಕೊಂಡ ಎನ್ನಲಾಗಿದೆ. ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಯೂ ಆತ ಬದುಕುಳಿದ. ಆಗಿನ ಕಾನೂನಿನಂತೆ ಆತ್ಮಹತ್ಯೆಗೆ ಯತ್ನದ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 309 ರ ಅಡಿಯಲ್ಲಿ ಆತನನ್ನು ಬಂಧಿಸಿ ಯುವಕನನ್ನು ಜೈಲಿಗೆ ತಳ್ಳಲಾಯಿತು.

ಆಗಿನ ಕಾನೂನಿನ್ವಯ “ಆತ್ಮಹತ್ಯೆಗೆ ಪ್ರಯತ್ನಿಸುವ ಮತ್ತು ಅಂತಹ ಅಪರಾಧದ ಕಾರ್ಯವನ್ನು ಮಾಡಿದರೆ, 1 ವರ್ಷದವರೆಗೆ ವಿಸ್ತರಿಸಬಹುದಾದ ಅವಧಿಗೆ ಸರಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ’ ಎಂದು ಹೇಳಲಾಗಿತ್ತು. ಇದರ ಅರ್ಥ ಅವನಿಗೆ ಒಂದು ವರ್ಷ ಶಿಕ್ಷೆಯಾಗಬೇಕಿತ್ತು. ಆದರೆ ಅಲ್ಲಿಯೂ ಆತನ ಅದೃಷ್ಟ ನೆಟ್ಟಗಿರಲಿಲ್ಲ. ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ 5 ವರ್ಷಗಳ ಕಾಲ ನಡೆಯಿತು. ಅಲ್ಲಿಯವರೆಗೂ ಯುವಕ ಜೈಲಿನಲ್ಲಿಯೇ ಇದ್ದ. 

ಕೊನೆಗೆ ಈತನ ವಿರುದ್ಧ ಮಾಡಿರುವ ಆರೋಪಗಳ ಕುರಿತಂತೆ ಸಾಕ್ಷ್ಯಾಧಾರಗಳನ್ನು ಒದಗಿಸಲು ಪ್ರಾಸಿಕ್ಯೂಷನ್‌ ವಿಫಲವಾಯಿತು. ಆದ್ದರಿಂದ ‘ಆರೋಪಿಯು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆಂದು ವಕೀಲರು ಸಾಕ್ಷಿ ಸಮೇತ ನಿರೂಪಿಸಬೇಕು. ಆದರೆ, ವಕೀಲರು ತಂದಿರುವ ಎಲ್ಲಾ ಸಾಕ್ಷಿಗಳು, ವ್ಯಕ್ತಿಯು ವಿಷ ಸೇವಿಸುವುದನ್ನಾಗಲಿ, ಚಾಕುವಿನಿಂದ ಇರಿದುಕೊಂಡಿರುವುದನ್ನು ಕಣ್ಣಾರೆ ನೋಡಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಆರೋಪಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಸಾಬೀತುಮಾಡಲು ಸ್ಪಷ್ಟವಾದ ಸಾಕ್ಷ್ಯಾಧಾರಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಯುವಕನನ್ನು ಬಿಡುಗಡೆ ಮಾಡಲಾಗಿದೆ’ ಎಂದು ನ್ಯಾಯಾಲಯ ಆದೇಶಿಸಿದೆ.

Ads on article

Advertise in articles 1

advertising articles 2

Advertise under the article