-->

ಆರು ವರ್ಷಗಳಿಂದ ಪತಿಯ ಆಹಾರಕ್ಕೆ ಡ್ರಗ್ಸ್ ಬೆರೆಸುತ್ತಿದ್ದ ಪತ್ನಿ ಅರೆಸ್ಟ್

ಆರು ವರ್ಷಗಳಿಂದ ಪತಿಯ ಆಹಾರಕ್ಕೆ ಡ್ರಗ್ಸ್ ಬೆರೆಸುತ್ತಿದ್ದ ಪತ್ನಿ ಅರೆಸ್ಟ್

ತಿರುವನಂತಪುರಂ: ಕೇರಳ ರಾಜ್ಯದ ಕೊಟ್ಟಾಯಂ ಜಿಲ್ಲೆಯ ಪಾಲಾ ಪಟ್ಟಣದ ಮಹಿಳೆಯೋರ್ವರನ್ನು ಪತಿಗೇ ಆಹಾರದಲ್ಲಿ ಮಾದಕವಸ್ತು ಹಾಕುತ್ತಿದ್ದ ಆರೋಪದಲ್ಲಿ ಬಂಧಿಸಲಾಗಿದೆ. ಈ ಬಗ್ಗೆ ಪತಿ ನೀಡಿರುವ ದೂರಿನನ್ವಯ ಪತ್ನಿಯನ್ನು ಬಂಧಿಸಲಾಗಿದೆ.

ಪತಿ ಸತೀಶ್ (38) ನೀಡಿದ ದೂರಿನನ್ವಯ ಆರೋಪಿತೆ ಪತ್ನಿ ಆಶಾ ಸುರೇಶ್ (36) ನನ್ನು ಪೊಲೀಸರು ಬಂಧಿಸಿದ್ದಾರೆ.

ಈ ದಂಪತಿಗೆ 2006ರಲ್ಲಿ ವಿವಾಹವಾಗಿತ್ತು. ಆರಂಭದಲ್ಲಿ ತನ್ನ ವ್ಯವಹಾರದಿಂದ ಸಂಕಷ್ಟದಲ್ಲಿದ್ದ ಸತೀಶ್, ಬಳಿಕ ಐಸ್ ಕ್ರೀಮ್ ಉದ್ಯಮ ಆರಂಭಿಸಿದ್ದರು. 2012 ರಲ್ಲಿ, ಈ ದಂಪತಿ ಪಾಲಕ್ಕಾಡ್‌ನಲ್ಲಿ ಸ್ವಂತ ಮನೆಯನ್ನೂ ಖರೀದಿಸಿದ್ದರು.

ಆದರೆ ಆ ಬಳಿಕ ಆಶಾ ಕ್ಷುಲ್ಲಕ ಕಾರಣಕ್ಕೆ ಪತಿ ಸತೀಶ್ ರೊಂದಿಗೆ ಜಗಳವಾಡುತ್ತಿದ್ದಳು. ಸಮಯ ಕಳೆದಂತೆ, ಸತೀಶ್ ಬಹಳ ಸುಸ್ತಾಗುತ್ತಿದ್ದರು. ಈ ಬಗ್ಗೆ ವೈದ್ಯರನ್ನು ಸಂಪರ್ಕಿಸಿದ ವೇಳೆ ಅವರು ಸಕ್ಕರೆ ಅಂಶ ಕಡಿಮೆಯಾಗಿರುವುದು ಸುಸ್ತಿಗೆ ಕಾರಣವಾಗಿದೆ ಎಂದು ಸಲಹೆ ನೀಡಿದ್ದರು. ಆದರೆ, ನಿರಂತರ ಔಷಧ ಸೇವಿಸಿದರೂ ಸತೀಶ್ ಆರೋಗ್ಯ ಸುಧಾರಿಸಿರಲಿಲ್ಲ.

2021ರ ಸೆಪ್ಟೆಂಬರ್ ಬಳಿಕ ಸತೀಶ್ ಮನೆಯ ಆಹಾರವನ್ನು ಸೇವಿಸುವುದನ್ನು ತಪ್ಪಿಸಿಕೊಂಡರು. ಕ್ರಮೇಣ ಸತೀಶ್ ಆರೋಗ್ಯ ಸ್ಥಿತಿ ಸುಧಾರಿಸ ತೊಡಗಿತು. ಇದರಿಂದ ಅನುಮಾನಗೊಂಡು, ಆಶಾ ತನ್ನ ಆಹಾರಕ್ಕೆ ಯಾವುದಾದರೂ ಔಷಧವನ್ನು ಸೇರಿಸುತ್ತಿದ್ದಾಳೆಯೇ ಎಂದು ಪತ್ತೆಹಚ್ಚಲು ಸತೀಶ್ ತನ್ನ ಸ್ನೇಹಿತರೋರ್ವರ ಸಹಾಯ ಕೇಳಿದ್ದರು.

ಸತೀಶ್ ಸ್ನೇಹಿತ ಉಪಾಯವಾಗಿ ಆಶಾ ಬಾಯಿ ಬಿಡಿಸಿದಾಗ ಆಕೆ ಸತೀಶ್‌ ನ ಆಹಾರಕ್ಕೆ ಮಾದಕ ವಸ್ತು ಸೇರಿಸುತ್ತಿರುವುದು ತಿಳಿದು ಬಂದಿದೆ. ಅಲ್ಲದೆ ಆಕೆ ವಾಟ್ಸ್ಆ್ಯಪ್‌ನಲ್ಲಿ ಅದರ ಚಿತ್ರವನ್ನೂ ಕಳುಹಿಸಿದ್ದಳು. ಇದರಿಂದ ಕುಪಿತಗೊಂಡ ಸತೀಶ್ ಮನೆಯೊಳಗಿನ ಸಿಸಿಟಿವಿ ದೃಶ್ಯಗಳನ್ನು ಪಡೆದುಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರ ಪ್ರಕಾರ, ಸತೀಶ್ ಕಚೇರಿಗೆ ಕೊಂಡೊಯ್ಯುತ್ತಿದ್ದ ಆಹಾರ ಮತ್ತು ನೀರಿಗೂ ಸಹ ಪತ್ನಿ ಆಶಾ ಡ್ರಗ್ಸ್ ಬೆರೆಸುತ್ತಿದ್ದಳು. ಸತೀಶ್ ತನ್ನ ಆಸ್ತಿಯಿಂದ ಆಕೆಗೆ ಏನನ್ನೂ ನೀಡಿಲ್ಲ. ಎಲ್ಲಾ ಆಸ್ತಿಯನ್ನು ತನ್ನ ಕುಟುಂಬ ಸದಸ್ಯರು ಮತ್ತು ಸಹೋದರರಿಗೆ ನೀಡುವುದಾಗಿ ಹೇಳಿದ್ದಾನೆ. ಅದಕ್ಕಾಗಿ ತಾನು ಈ ರೀತಿ ಮಾಡಿದ್ದೆ ಎಂದು ಆಶಾ ಪೊಲೀಸರ ಬಳಿ ಹೇಳಿಕೆ ನೀಡಿದ್ದಾಳೆ.

Ads on article

Advertise in articles 1

advertising articles 2

Advertise under the article