ಕೊಚ್ಚಿ: ರಸ್ತೆ ಅಪಘಾತಕ್ಕೆ 'ಮಿಸ್‌ ಕೇರಳ', 'ಮಿನ್‌ ರನ್ನರ್‌' ಆಗಿದ್ದ ಬ್ಯೂಟಿ ಕ್ವೀನ್‌ಗಳು ಬಲಿ

ಕೊಚ್ಚಿ: ನಗರದ ವೈಟಿಲದಲ್ಲಿ ನಡೆದ ಭೀಕರ ಅಪಘಾತವೊಂದರಲ್ಲಿ ಮಿಸ್‌ ಕೇರಳ ಹಾಗೂ ಮಿನ್‌ ರನ್ನರ್‌ ಅಪ್‌ ಆಗಿದ್ದ ಇಬ್ಬರು ಬ್ಯೂಟಿ ಕ್ವೀನ್‌ಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

2019ರಲ್ಲಿ ಮಿಸ್ ಕೇರಳ ಆಗಿದ್ದ ಅನ್ಸಿ ಕಬೀರ್ (24) ಮತ್ತು ಅದೇ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದ ಅಂಜನಾ ಶಾಜನ್ (25) ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 

ಅನ್ಸಿ ಕಬೀರ್ ಹಾಗೂ ಅಂಜನಾ ಶಾಜನ್ ಇಬ್ಬರೂ ನಿನ್ನೆ ತಡರಾತ್ರಿ ತ್ರಿಶೂರ್​ನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭ ಬೈಕ್ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಕಾರಿನಲ್ಲಿ ಒಟ್ಟು ನಾಲ್ವರು ಇದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಘಟನೆಯಲ್ಲಿ ಅನ್ಸಿ ಹಾಗೂ ಅಂಜನಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಇನ್ನಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಚಾಲಕ ಮಾತ್ರ ಸೀಟ್ ಬೆಲ್ಟ್ ಹಾಕಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದು, ಪ್ರಕರಣದ ಸಂಪೂರ್ಣ ವಿವರ ಇನ್ನಷ್ಟೇ ತಿಳಿಯಬೇಕಿದೆ.