ಹಾರ್ದಿಕ್ ಪಾಂಡ್ಯ 5ಕೋಟಿ ರೂ. ಬೆಲೆ ವಾಚ್ ವಶಪಡಿಸಿಕೊಂಡು ಕಸ್ಟಮ್ಸ್ ಅಧಿಕಾರಿಗಳು: ಆರೋಪ ತಳ್ಳಿ ಹಾಕಿದ ಪಾಂಡ್ಯ

ಮುಂಬೈ: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯರ 5 ಕೋಟಿ ರೂ. ಮೌಲ್ಯದ ಎರಡು ವಾಚ್‌ಗಳನ್ನು ಕಸ್ಟಮ್ಸ್ ಇಲಾಖೆಯು ಮುಂಬೈ ವಿಮಾನ ನಿಲ್ದಾಣದಲ್ಲಿ ಜಪ್ತಿ ಮಾಡಿದೆ.

ಐಸಿಸಿ ಟಿ20 ವಿಶ್ವಕಪ್ ನಿರಾಶಾದಾಯಕ ಫಲಿತಾಂಶದ ಬಳಿಕ ಭಾರತೀಯ ಆಟಗಾರರು ತವರಿಗೆ ಹಿಂದಿರುಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಹಾರ್ದಿಕ್ ಪಾಂಡ್ಯ ಬಳಿ ದುಬಾರಿ ವಾಚ್ ಗಳ ಇನ್ ವಾಯ್ಸ್ ಇರದಿರುವ ಹಿನ್ನೆಲೆಯಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.

ಆದರೆ ವಿಚಾರವನ್ನು ಹಾರ್ದಿಕ್ ಪಾಂಡ್ಯ ಮಾತ್ರ ತಳ್ಳಿಹಾಕಿದ್ದಾರೆ. 1.5 ಕೋಟಿ ರೂ. ಮೌಲ್ಯದ ಒಂದು ವಾಚ್ ನ್ನು 'ಸರಿಯಾದ ಮೌಲ್ಯಮಾಪನ' ಕ್ಕಾಗಿ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಆದರೆ ಹಾರ್ದಿಕ್ ಪಾಂಡ್ಯ ಬಳಿ ಎರಡು ವಾಚ್ ಗಳ ಬಿಲ್ ಇಲ್ಲ ಎಂಬ ಕಾರಣಕ್ಕೆ ಕಸ್ಟಮ್ಸ್ ಇಲಾಖೆ ರವಿವಾರ ರಾತ್ರಿ ವಾಚ್ ಗಳನ್ನು ವಶಪಡಿಸಿಕೊಂಡಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. 

ಈ ವರದಿಯನ್ನು ನಿರಾಕರಿಸಿರುವ ಪಾಂಡ್ಯ ಟ್ವಿಟರ್‌ನಲ್ಲಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ. "ನಾನು ತಂದಿರುವ ವಸ್ತುಗಳನ್ನು ಘೋಷಿಸಲು ಹಾಗೂ ಅಗತ್ಯವಿರುವ ಕಸ್ಟಮ್ಸ್ ಸುಂಕವನ್ನು ಪಾವತಿ ಮಾಡಲು  ಸ್ವಯಂ ಪ್ರೇರಣೆಯಿಂದ ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್ ಕೌಂಟರ್‌ಗೆ ಹೋಗಿದ್ದೇನೆ. ನಾನು ಕಸ್ಟಮ್ಸ್‌ಗೆ ಘೋಷಿಸಿದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಗ್ರಹಿಕೆಗಳು ಹರಿದಾಡುತ್ತಿವೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಏನಾಯಿತು ಎಂಬುದರ ಕುರಿತು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ"ಎಂದರು.