ಪಂಜಾಬ್ ಕಾಂಗ್ರೆಸ್ ನಲ್ಲಿ ಮುಗಿಯದ ಗೊಂದಲ- ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ

 



 

ಚಂಡಿಗಡ: ಪಂಜಾಬ್ ರಾಜ್ಯದ ಕಾಂಗ್ರೆಸ್ ನಲ್ಲಿ ಭಿನ್ನಮತ ತಾರಕಕ್ಕೇರಿದ್ದು ಇದೀಗ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿದ್ದಾರೆ.

 

ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿಧು ನಡುವಿನ ಭಿನ್ನ ಮತ ತಾರಕಕ್ಕೇರಿತ್ತು.  ಇತ್ತೀಚೆಗೆ ಕಾಂಗ್ರೆಸ್ ಶಾಸಕರ ಭಿನ್ನಾಭಿಪ್ರಾಯಗಳಿಂದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದರ ಬಳಿಕ ಚರಣಜಿತ್ ಸಿಂಗ್ ಚನ್ನಿ ನೇತೃತ್ವದಲ್ಲಿ ನೂತನ ಸರಕಾರ ರಚನೆಯಾಗಿತ್ತು. ಇದರ ಬೆನ್ನಲ್ಲೆ ಸಿಧು ರಾಜೀನಾಮೆ ಸಲ್ಲಿಸಿದ್ದಾರೆ.

 

ರಾಜೀನಾಮೆ ಒತ್ರವನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಕಳುಹಿಸಿದ ಅವರು  ಪಂಜಾಬ್ ನ ಭವಿಷ್ಯ ಮತ್ತು ಪಂಜಾಬ್ ನ ಕಲ್ಯಾಣದ ವಿಚಾರದಲ್ಲಿ ನಾನೆಂದು ರಾಜೀ ಮಾಡಿಕೊಳ್ಳಲಾರೆ. ಈ ಕಾರಣದಿಂದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಮತ್ತು ಪಕ್ಷದಲ್ಲಿ ಮುಂದುವರಿಯುತ್ತೇನೆ ಎಂದು ತಿಳಿಸಿದ್ದಾರೆ.

 

ಸಿಧು ಅವರನ್ನು ಅಂದಿನ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ವಿರೋಧದ ನಡುವೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ಅಮರೀಂದರ್ ಸಿಂಗ್ ಮತ್ತು  ಸಿಧು ಬದ್ದ ವೈರಿಯಾಗಿದ್ದು ಮುಂದಿನ ಚುನಾವಣೆಯಲ್ಲಿ ಸಿಧು ಅವರನ್ನು ಸೋಲಿಸಲು ಎಂತಹ ತ್ಯಾಗಕ್ಕೂ ಸಿದ್ದ ಎಂದು ಅಮರಿಂದರ್ ಸಿಂಗ್ ಹೇಳಿದ್ದರು..