ಮಂಗಳೂರು: ಮಂಜುನಾಥ್ ಎಜುಕೇಷನ್ ಟ್ರಸ್ಟ್ (ರಿ)ಮತ್ತು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಜ.26 ರಂದು ಮಂಗಳೂರು ಉರ್ವಾಸ್ಟೋರ್‍ನ ಯುವವಾಹಿನಿ ಸಭಾಂಗಣದಲ್ಲಿ ಕರಾವಳಿ ಸಾಂಸ್ಕೃತಿಕ ಸೌರಭ ಆಚರಿಸಲಾಗಿದ್ದು
ಪದ್ಮಶ್ರೀ ಪುರಸ್ಕೃತ ಹಾಜಬ್ಬ ಹರೇಕಳ ಸಮಾರಂಭ ಉದ್ಘಾಟಿಸಿದ್ದು, ಬಳಿಕ ಪದ್ಮಶ್ರೀ ಹಾಜಬ್ಬ ಅವರಿಗೆ ಅಭಿನಂದಿಸಿ ಗೌರವಿಸಲಾಯಿತು.
ಕತ್ತಲ್‍ಸಾರ್ ಅಧ್ಯಕ್ಷೀಯ ಭಾಷಣಗೈದು, ತುಳು ಭಾಷೆ ಕನ್ನಡದ ತಂಗಿ. ತುಳುನಾಡಿನವರು ವಿಶಾಲ ಮನೋಭಾವದವರು. ನಾವು ನಮ್ಮಲ್ಲಿನ ವೃತ್ತಗಳಿಗೆ ದೇಶದ ವೀರರ, ಸಾಧಕರ ಹೆಸರನ್ನು ಇಟ್ಟಿದ್ದೇವೆ. ಆದರೆ ತುಳುನಾಡಿನ ವೀರರಾದ ಕೋಟಿ ಚೆನ್ನಯ, ಅಬ್ಬಕ್ಕರ ಹೆಸರು ಕರಾವಳಿಯ ಹೊರಗೆ ಎಲ್ಲೂ, ಯಾವ ವೃತ್ತದಲ್ಲೂ ಕಾಣುತ್ತಿಲ್ಲ ಏಕೆ..? ಎಂದು ಪ್ರಶ್ನಿಸಿ ತುಳು ಭಾಷೆಗೆ ಸ್ವಂತ ಲಿಪಿ ಇದೆ, ಸ್ವಂತ ಕ್ಯಾಲೆಂಡರ್ ಇದೆ, ಆದರೂ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ತುಳು ಭಾಷೆಯನ್ನು ಸೇರಿಸದೆ ಇರುವುದು ಅತ್ಯಂತ ಶೋಚನೀಯ. ಇದಕ್ಕಾಗಿ ತುಳುನಾಡಿನ ಹೊರಗಿನವರು ಕೂಡಾ ಹೋರಾಡಬೇಕು ಎಂದು ಕರೆಯಿತ್ತರು .
ಕನ್ನಡ ಸಂಘ ಬಂಗಾರಪೇಟೆ ಅಧ್ಯಕ್ಷ ಸುಬ್ರಮಣಿ ಎಂ. ಪಲ್ಲವಿಮಣಿ, ಬಂದಿಖಾನೆ ವಿಭಾಗದ ಎಎಸ್‍ಪಿ ಚಂದನ್ ಪಟೇಲ್, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತ್‍ನ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ನಗರ ಮತ್ತು ಗ್ರಾಮೀಣ ಯೋಜನೆ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್ ಎ.ಬಿ., ಕಾರ್ಪೊರೇಟರ್ ರಂಜಿನಿ ಕೋಟ್ಯಾನ್ ಅತಿಥಿ ಅಭ್ಯಾಗತರಾಗಿದ್ದರು.
ನಾವು ಸ್ಥಳೀಯ ವಾಗಿ ಕರಾವಳಿ ಸಾಂಸ್ಕೃತಿಕ ಸೌರಭ, ರಾಜ್ಯ ಹೊರ ರಾಜ್ಯದಲ್ಲಿ ರಾಷ್ಟ್ರೀಯ ಸಂಸ್ಕೃತಿ ಸಮ್ಮೇಳನ ಮತ್ತು ವಿದೇಶಗಳಲ್ಲಿ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭಗಳನ್ನು 14 ವರ್ಷಗಳಿಂದ ಸುಮಾರು 50 ಸಮಾರಂಭಗಳನ್ನು ಯಶಸ್ವಿಯಾಗಿ ಏರ್ಪಡಿಸಿದ ಹೆಗ್ಗಳಿಕೆ ನಮ್ಮದು ಎಂದು ಪ್ರಸ್ತಾವನೆಯಲ್ಲಿ ಮಂಜುನಾಥ್ ಎಜುಕೇಷನ್ ಟ್ರಸ್ಟ್ಟ್ ಅಧ್ಯಕ್ಷ ಇಂ| ಕೆ.ಪಿ ಮಂಜುನಾಥ್ ಸಾಗರ್ ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಡಾ| ಕಾಸರಗೋಡು ಅಶೋಕ್ ಕುಮಾರ್, ಡಾ| ಎಸ್. ನಾಗರಾಜ ಮಾಯಸಂದ್ರ ಪ್ರಭಾಕರ ಕಲ್ಲೂರಾಯ, ರಾಧಾಕೃಷ್ಣ ಟಿ. ಅವರಿಗೆ ಕರ್ನಾಟಕ ಸೌರಭ ಪ್ರಶಸ್ತಿ 2021 ಹಾಗೂ ಶ್ರೀಮತಿ ಸುಭಾಷಿಣಿ ಬೆಳ್ತಂಗಡಿ, ಮೆಟ್ರೋ ಮುಜೀಬ್, ಕೃಷ್ಣಪ್ಪ ಗೌಡ ಪಡ್ಡಂಬೈಲ್ ಅವರಿಗೆ ಕರಾವಳಿ ಸೌರಭ ಪ್ರಶಸ್ತಿ 2021 ಪ್ರದಾನಿಸಿ ಸನ್ಮಾನಿಸಲಾಯಿತು .
ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗಾಗಿ ಕರಾವಳಿಯ ಸೊಗಡು ವಿಷಯದ ಬಗ್ಗೆ ಚುಟುಕು ರಚನಾ ಸ್ಪರ್ಧೆ ನಡೆಸಲಾಗಿದ್ದು 47 ಸ್ಪರ್ಧಿಗಳು ಭಾಗವಹಿಸಿದ್ದರು. ಪ್ರಥಮ ಬಹುಮಾನ ಎಂ.ಪಿ ಬಶೀರ್ ಅಹಮ್ಮದ್ ಬಂಟ್ವಾಳ (ರೂ.1100/-), ದ್ವಿತೀಯ ಬಹುಮಾನ ಕಲಾವತಿ ಸುರತ್ಕಲ್ (ರೂ.700/-), ತೃತೀಯ ಬಹುಮಾನ ಕೋಟ ಶ್ರೀಕೃಷ್ಣ ಆಹಿತಾನಲ (ರೂ.300/-) ಪಡೆದುಕೊಂಡರು.
ಚುಟುಕು ಸಾಹಿತ್ಯ ಪರಿಷತ್ತಿನ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಸಾರಥ್ಯದಲ್ಲಿ ಚುಟುಕು ಹನಿಗವನ ಗೋಷ್ಠಿ, ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ,ಸಾಹಿತಿ ಡಾ ಮಾಲತಿ ಶೆಟ್ಟಿ ಮಾಣೂರು ಅಧ್ಯಕ್ಷತೆಯಲ್ಲಿ ಹನಿಗವನ ಕವಿಗೋಷ್ಠಿ, ರಂಗನಟ, ಸಾಹಿತಿ ಪರಮಾನಂದ ಸಾಲ್ಯಾನ್ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗುಬ್ಬಚ್ಚಿ ಗೂಡು ತಂಡದವರಿಂದ ನೃತ್ಯ ರೂಪಕ ,ಬೆಂಗಳೂರಿನ ಸುದರ್ಶನ್ ಮತ್ತು ತಂಡದವರಿಂದ ಜಾನಪದ ನೃತ್ಯ ನಡೆಯಿತು.
ಎಸ್.ರವಿ ಕಾರ್ಯಕ್ರಮ ನಿರೂಪಿಸಿದರು. ಇಂ| ಕೆ ಪಿ ಮಂಜುನಾಥ್ ಸಾಗರ್ ಸ್ವಾಗತಿದರು . ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತ್‍ನ ಅಧ್ಯಕ್ಷ ಡಾ| ಕಾಸರಗೋಡು ಅಶೋಕ್ ಕುಮಾರ್ ಧನ್ಯವಾದ ಸಮರ್ಪಿಸಿದರು.
