ಮಂಗಳೂರು: ಕರಾವಳಿಯ ಧಾರ್ಮಿಕ ಉತ್ಸವಗಳಲ್ಲಿ ಅನ್ನದಾಸೋಹದ ಮೂಲಕ ‘ನಳಪಾಕ’ ಎಂದೇ ಮನೆಮಾತಾಗಿರುವ ಖ್ಯಾತ ಪಾಕಶಾಸ್ತ್ರ ತಜ್ಞ ವೆಂಕಟೇಶ್ ಪಾವಂಜೆ ಅವರಿಗೆ ಪಾಕಶಾಸ್ತ್ರ ಕ್ಷೇತ್ರದಲ್ಲಿ ಸಲ್ಲಿಸಿದ ಅನನ್ಯ ಸೇವೆ ಹಾಗೂ ವಿಶೇಷ ಸಾಧನೆಗಾಗಿ 2026ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಪಾಕಶಾಸ್ತ್ರದಲ್ಲಿ ಅಪಾರ ಅನುಭವ, ಶ್ರದ್ಧೆ ಹಾಗೂ ನಿಸ್ವಾರ್ಥ ಸಮರ್ಪಣಾ ಮನೋಭಾವವನ್ನು ಮೈಗೂಡಿಸಿಕೊಂಡಿರುವ ವೆಂಕಟೇಶ್ ಪಾವಂಜೆ ಅವರು ಈ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ.
ಲಕ್ಷಾಂತರ ಭಕ್ತರಿಗೆ ತೃಪ್ತಿಯ ಅನ್ನಪ್ರಸಾದ ಸೇವೆ:
ಕರಾವಳಿಯ ಪ್ರಸಿದ್ಧ ಪುಣ್ಯಕ್ಷೇತ್ರಗಳಾದ:
- ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ
- ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ
- ಪಾವಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ
- ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ
- ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ
ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ನಡೆದ ಐತಿಹಾಸಿಕ ಬ್ರಹ್ಮಕಲಶೋತ್ಸವ, ನಾಗಮಂಡಲ ಹಾಗೂ ಬೃಹತ್ ಧಾರ್ಮಿಕ ಸಮಾರಂಭಗಳಲ್ಲಿ ಲಕ್ಷಾಂತರ ಭಕ್ತಾದಿಗಳಿಗೆ ಸಾಂಪ್ರದಾಯಿಕ ಶೈಲಿಯ ಶುದ್ಧ, ರುಚಿಕರ ಪಾಕವಿಧಾನದ ಅನ್ನಪ್ರಸಾದವನ್ನು ಅತ್ಯಂತ ಭಕ್ತಿಭಾವ ಹಾಗೂ ಶುಚಿತ್ವದೊಂದಿಗೆ ಸಿದ್ಧಪಡಿಸಿ ಯಶಸ್ವಿಯಾಗಿ ಸೇವೆ ಸಲ್ಲಿಸಿರುವುದು ಇವರ ದಣಿವರಿಯದ ಸಾಧನೆಗೆ ಸಾಕ್ಷಿಯಾಗಿದೆ. ಅನ್ನದಾನ ಸೇವೆಯ ಮೂಲಕ ಅಸಂಖ್ಯಾತ ಭಕ್ತರ ಮನಗೆದ್ದಿರುವ ಅವರ ಪಾಕ ನೈಪುಣ್ಯತೆಗೆ ಸಂದ ಈ ಗೌರವವು ಕರಾವಳಿಯಾದ್ಯಂತ ಹರ್ಷಕ್ಕೆ ಕಾರಣವಾಗಿದೆ.