ಕೌಶಂಬಿ (ಉತ್ತರ ಪ್ರದೇಶ):
ಕಾಲ್ ರೆಕಾರ್ಡಿಂಗ್ ಒಂದರ ವಿಚಾರವಾಗಿ ಉಂಟಾದ ಜಗಳದಿಂದಾಗಿ ಮದುವೆ ರದ್ದಾಗಿದ್ದು, ಇದರಿಂದ ಮನನೊಂದ 23 ವರ್ಷದ ಯುವತಿಯೊಬ್ಬಳು ನೆರೆಯ ಗ್ರಾಮದ ಬೃಹತ್ ನೀರಿನ ಟ್ಯಾಂಕ್ ಏರಿ ಆತ್ಮಹತ್ಯೆಯ ಬೆದರಿಕೆ ಹಾಕಿ ಗಂಟೆಗಳ ಕಾಲ ಹೈಡ್ರಾಮಾ ಸೃಷ್ಟಿಸಿದ ಘಟನೆ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ನಡೆದಿದೆ.
ಸರಾಯ್ ಅಕಿಲ್ ಪಟ್ಟಣದ ಅವಧೇಶ್ ಕುಮಾರ್ ಎಂಬಾತನೊಂದಿಗೆ ಅನುಪಮಾ (23) ಎಂಬ ಯುವತಿಯ ವಿವಾಹ ನಿಶ್ಚಯವಾಗಿತ್ತು. ಇನ್ನೇನು ಮದುವೆ ಸಮೀಪಿಸುತ್ತಿದ್ದ ಸಂದರ್ಭದಲ್ಲೇ ಇಬ್ಬರ ನಡುವೆ ಭಿನ್ನಾಭಿಪ್ರಾಯ ತಲೆದೋರಿ ಇಡೀ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ವಿವಾದಕ್ಕೆ ಕಾರಣವಾದ ಕಾಲ್ ರೆಕಾರ್ಡಿಂಗ್:
ಮದುವೆ ನಿಶ್ಚಯವಾಗಿದ್ದ ವರ ಅವಧೇಶ್ ಕುಮಾರ್‌ಗೆ ಯಾರೋ ಅಪರಿಚಿತರು ಆಡಿಯೋ ಕಾಲ್ ರೆಕಾರ್ಡಿಂಗ್ ಒಂದನ್ನು ಕಳುಹಿಸಿದ್ದರು. ಆ ರೆಕಾರ್ಡಿಂಗ್ ಕೇಳಿದ ನಂತರ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ಹಾಗೂ ಗಲಾಟೆ ನಡೆದಿದೆ. ಈ ಜಗಳದ ಬೆನ್ನಲ್ಲೇ ಆಕ್ರೋಶಗೊಂಡ ವರ ಅವಧೇಶ್, "ನಾನು ಈ ಯುವತಿಯನ್ನು ಯಾವುದೇ ಕಾರಣಕ್ಕೂ ಮದುವೆಯಾಗುವುದಿಲ್ಲ" ಎಂದು ಖಡಾಖಂಡಿತವಾಗಿ ಮದುವೆಯನ್ನು ನಿರಾಕರಿಸಿದ್ದಾನೆ.
4 ಕಿ.ಮೀ ನಡೆದು ಬಂದು ನೀರಿನ ಟ್ಯಾಂಕ್ ಏರಿದ ಯುವತಿ:
ವರನ ನಿರ್ಧಾರದಿಂದ ತೀವ್ರ ಆಘಾತ ಹಾಗೂ ಬೇಸರಕ್ಕೊಳಗಾದ ಅನುಪಮಾ, ತನ್ನ ಮನೆಯಿಂದ ಸುಮಾರು 4 ಕಿಲೋಮೀಟರ್ ದೂರವಿರುವ ಮಖೈಪುರ ಗ್ರಾಮಕ್ಕೆ ನಡೆದುಕೊಂಡೇ ತೆರಳಿದ್ದಾಳೆ. ಅಲ್ಲಿನ ಸಾರ್ವಜನಿಕ ನೀರಿನ ಟ್ಯಾಂಕ್ ಮೇಲೇರಿ ಕುಳಿತಿದ್ದಾಳೆ.
ಟ್ಯಾಂಕ್ ಮೇಲೆ ಯುವತಿ ಇರುವುದನ್ನು ಗಮನಿಸಿದ ಸ್ಥಳೀಯ ಗ್ರಾಮಸ್ಥರು ಆಕೆಯನ್ನು ಕೆಳಗಿಳಿಯುವಂತೆ ಎಷ್ಟೇ ಮನವಿ ಮಾಡಿದರೂ ಆಕೆ ಕಿವಿಗೊಡದೆ ಕೆಳಗೆ ಹಾರುವುದಾಗಿ ಬೆದರಿಕೆ ಹಾಕಿದ್ದಾಳೆ. ಸ್ಥಳದಲ್ಲಿ ನೂರಾರು ಜನರು ಜಮಾಯಿಸಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಗಂಟೆಗಳ ಕಾರ್ಯಾಚರಣೆ ಬಳಿಕ ಸುರಕ್ಷಿತ ರಕ್ಷಣೆ:
ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರ ತಂಡ ಯುವತಿಯೊಂದಿಗೆ ಸತತ ಸಮಾಲೋಚನೆ ನಡೆಸಿ, ನ್ಯಾಯ ಒದಗಿಸುವ ಭರವಸೆ ನೀಡಿದೆ. ಗಂಟೆಗಳ ಕಾಲ ಸತತ ಹರಸಾಹಸ ಪಟ್ಟ ಪೊಲೀಸರು ಅಂತಿಮವಾಗಿ ಆಕೆಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಳಿಕ ಯುವತಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ ಪೊಲೀಸರು, ಆಕೆಯ ಪೋಷಕರನ್ನು ಸಂಪರ್ಕಿಸಿ ಅವರ ವಶಕ್ಕೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
