ಮಂಗಳೂರು: ಶಿವಮೊಗ್ಗದಿಂದ ಬಂದು ನಂದಿಕೂರಿನಲ್ಲಿ ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಿರುವ ಬಡ ಕುಟುಂಬದ ಬಾಲಕ ಗಣೇಶನ ಕಣ್ಣೀರ ಕಥೆಗೆ ಮಂಗಳೂರಿನ 'ಮೀಡಿಯಾ ಮನಸುಗಳು' ಬಳಗ ಹಾಗೂ ಸಮಾನಮನಸ್ಕ ದಾನಿಗಳು ಆಸರೆಯಾಗಿ ನಿಂತಿದ್ದಾರೆ. ಶಾಲೆಯ ರಜಾ ದಿನಗಳಲ್ಲಿ ದೇವಸ್ಥಾನ, ಮಾರುಕಟ್ಟೆಗಳಲ್ಲಿ ಪೆನ್ ಹಾಗೂ ಪುಸ್ತಕಗಳನ್ನು ಮಾರಿ ಹೆತ್ತವರಿಗೆ ನೆರವಾಗುತ್ತಿದ್ದ ಈ ಬಾಲಕನ ಕುಟುಂಬಕ್ಕೆ ಆರ್ಥಿಕ ನೆರವು ಹಾಗೂ ದಿನಸಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆಯಲಾಗಿದೆ.
ಸಹಾಯದ ಹಣವನ್ನೂ ದೋಚಿದ ಸೈಬರ್ ವಂಚಕರು:
- ದಾನಿಗಳಿಂದ ಹರಿದುಬಂದಿತ್ತು ₹20 ಸಾವಿರಕ್ಕೂ ಅಧಿಕ ನೆರವು: ಪತ್ರಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತ ಶಶಿ ಬೆಳ್ಳಾಯರು ಅವರು ಬಾಲಕ ಗಣೇಶನ ಕಷ್ಟದ ಬದುಕಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಸಹೃದಯಿ ದಾನಿಗಳು ಕೇವಲ ಒಂದೇ ದಿನದಲ್ಲಿ ಬಾಲಕನ ತಾಯಿಯ ಬ್ಯಾಂಕ್ ಖಾತೆಗೆ ₹20,000ಕ್ಕೂ ಅಧಿಕ ಹಣವನ್ನು ವರ್ಗಾಯಿಸಿದ್ದರು.
- ಟ್ರಸ್ಟ್ ಹೆಸರಿನಲ್ಲಿ ವಂಚನೆ: ಆದರೆ, ಬಡ ಕುಟುಂಬದ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು, 'ಮಂತ್ರಾಲಯ ಟ್ರಸ್ಟ್' ಹೆಸರನ್ನು ದುರ್ಬಳಕೆ ಮಾಡಿಕೊಂಡು ಬಾಲಕನ ಹೆತ್ತವರ ಖಾತೆಯಲ್ಲಿದ್ದ ದಾನಿಗಳ ಹಣವನ್ನೆಲ್ಲಾ ಲಪಟಾಯಿಸಿದ್ದರು. ಇದರಿಂದ ಕಂಗಾಲಾಗಿದ್ದ ಕುಟುಂಬ ಮತ್ತೆ ಸಂಕಷ್ಟಕ್ಕೆ ಸಿಲುಕಿತ್ತು.
ಮತ್ತೆ ಕೈಜೋಡಿಸಿದ 'ಮೀಡಿಯಾ ಮನಸುಗಳು' ಮತ್ತು ದಾನಿಗಳು:
ಕುಟುಂಬಕ್ಕೆ ಎದುರಾದ ಆಘಾತಕ್ಕೆ ತಕ್ಷಣ ಸ್ಪಂದಿಸಿದ 'ಮೀಡಿಯಾ ಮನಸುಗಳು' ತಂಡದ ಸದಸ್ಯರೊಂದಿಗೆ ಸಾಮಾಜಿಕ ಕಾರ್ಯಕರ್ತೆ ಅನಿ ಮಂಗಳೂರು, ಚಂದನ ಅರುಣ್ ಶೆಟ್ಟಿ ಹಾಗೂ ಟೀಮ್ ಕಾಲಭೈರವ ಮಂಗಳೂರು ತಂಡಗಳು ಕೈಜೋಡಿಸಿದವು. ಸಂಗ್ರಹವಾದ ಆರ್ಥಿಕ ನೆರವಿನೊಂದಿಗೆ ಎರಡು ತಿಂಗಳಿಗೆ ಸಾಕಾಗುವಷ್ಟು ದಿನಸಿ (ರೇಷನ್) ಸಾಮಗ್ರಿಗಳನ್ನು ಖರೀದಿಸಿ ನೇರವಾಗಿ ನಂದಿಕೂರಿನಲ್ಲಿರುವ ಬಾಲಕನ ಮನೆಗೆ ತೆರಳಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಶಶಿ ಬೆಳ್ಳಾಯರು, ರಜನ್ ಕುಮಾರ್ ಕಾವೂರು, ಶಿವು ಕುಲಾಲ್ ಹಾಗೂ ಅನಿ ಮಂಗಳೂರು ಉಪಸ್ಥಿತರಿದ್ದರು.
"ಮೀಡಿಯಾ ಮನಸುಗಳ ಸಮಾಜಮುಖಿ ಕಾರ್ಯ ನಮಗೆಲ್ಲಾ ಸ್ಫೂರ್ತಿ" "ಸಾಮಾಜಿಕ ಜಾಲತಾಣಗಳಲ್ಲಿ ಗಣೇಶನ ಕುಟುಂಬದ ವಿಡಿಯೋ ನೋಡಿದಂದಿನಿಂದ ಆತನನ್ನು ಭೇಟಿ ಮಾಡಬೇಕೆಂದು ನಿರ್ಧರಿಸಿದ್ದೆ. ಅದಕ್ಕಾಗಿ 'ಮೀಡಿಯಾ ಮನಸುಗಳು' ಸಂಘಟನೆಯನ್ನು ಸಂಪರ್ಕಿಸಿ ಅವರೊಂದಿಗೆ ಕೈಜೋಡಿಸಿದ್ದೇನೆ. ಇಂತಹ ಸಮಾಜಮುಖಿ ಕಾರ್ಯಗಳು ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದು, ಮುಂದೆಯೂ ಇವರೊಂದಿಗೆ ಸದಾ ನಿಲ್ಲುತ್ತೇವೆ." — ಅನಿ ಮಂಗಳೂರು, ಸಾಮಾಜಿಕ ಕಾರ್ಯಕರ್ತೆ