ಹೈದರಾಬಾದ್:
ತೆಲಂಗಾಣದಲ್ಲಿ ಆರಂಭದಲ್ಲಿ ಆತ್ಮಹತ್ಯೆ ಎಂದು ಬಿಂಬಿತವಾಗಿದ್ದ 20 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಸಾವು ಪ್ರಕರಣಕ್ಕೆ ಪೊಲೀಸರ ತನಿಖೆಯಲ್ಲಿ ಆಘಾತಕಾರಿ ಟ್ವಿಸ್ಟ್ ಸಿಕ್ಕಿದೆ. ಆಕೆಗೆ ಬಲವಂತವಾಗಿ ಕೀಟನಾಶಕ (Pesticide) ಕುಡಿಸಿ, ನಕಲಿ ಡೆತ್‌ನೋಟ್ ಬರೆಸಿ ಕೊಲೆ ಮಾಡಿರುವುದು ಬಯಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜು ಉಪನ್ಯಾಸಕ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೈನಿಂಗ್ ಎಂಜಿನಿಯರಿಂಗ್ ವಿದ್ಯಾರ್ಥಿನಿ ತಂದ್ರ ಅಕ್ಷಿತಾರಾಣಿ (20) ಕೊಲೆಯಾದ ಯುವತಿ. ನಸ್ಪೂರಿನ ಸಿಂಗರೇಣಿ ಕಾಲರೀಸ್ ಪಾಲಿಟೆಕ್ನಿಕ್‌ನ ಹೊರಗುತ್ತಿಗೆ ಉಪನ್ಯಾಸಕ ಜೆಟ್ಟಿ ನವೀನ್ ಕುಮಾರ್ (38) ಹಾಗೂ ಸಿಂಗರೇಣಿ ಓವರ್‌ಮ್ಯಾನ್ ಬೊಮ್ಮಕಾಂತಿ ರವಿ ಕುಮಾರ್ (35) ಬಂಧಿತ ಆರೋಪಿಗಳು.
ಸ್ನೇಹದ ಸುತ್ತ ಹುಟ್ಟಿದ ದ್ವೇಷ – ಕೊಲೆಯಾದ ದುರಂತ:
ಅಕ್ಷಿತಾರಾಣಿ ಡಿಪ್ಲೊಮಾ ಕಲಿಯುತ್ತಿದ್ದ ದಿನಗಳಿಂದಲೇ ಉಪನ್ಯಾಸಕ ನವೀನ್ ಕುಮಾರ್ ಜೊತೆ ಪರಿಚಯವಿತ್ತು. ಬಳಿಕ ಆಕೆ ಮೈನಿಂಗ್ ಎಂಜಿನಿಯರಿಂಗ್ ಪದವಿ ವಿದ್ಯಾಭ್ಯಾಸಕ್ಕೆ ಸೇರಿದ್ದರು. ಗೋದಾವರಿಖಾನಿಯ ಸಿಂಗರೇಣಿ ಗಣಿಯಲ್ಲಿ ತರಬೇತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಅಲ್ಲಿ ಓವರ್‌ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರವಿ ಕುಮಾರ್ ಎಂಬಾತನ ಪರಿಚಯವಾಗಿ, ಇಬ್ಬರೂ ಆಪ್ತರಾಗಿದ್ದರು.
ಅಕ್ಷಿತಾರಾಣಿ ರವಿಯೊಂದಿಗೆ ಹೆಚ್ಚು ಸಲುಗೆ ಬೆಳೆಸಿದ್ದನ್ನು ಕಂಡು ಅಸೂಯೆ ಮತ್ತು ಆಕ್ರೋಶಗೊಂಡ ನವೀನ್ ಕುಮಾರ್, ಆಕೆಯೊಂದಿಗೆ ಜಗಳವಾಡಲು ಆರಂಭಿಸಿದ್ದನು. ಕೊನೆಗೆ ಇದು ಕೊಲೆಯ ಸಂಚಿಗೆ ದಾರಿಯಾಯಿತು.
ಕಾರಿನಲ್ಲಿ ಅಪಹರಿಸಿ ಬಲವಂತವಾಗಿ ಕೀಟನಾಶಕ ಕುಡಿಸಿದ!
ಸೆಪ್ಟೆಂಬರ್ 12 ರಂದು ಗೋದಾವರಿಖಾನಿಯ ಎಫ್‌ಸಿಐ ಕ್ರಾಸ್‌ರೋಡ್ಸ್ ಬಳಿ ಅಕ್ಷಿತಾರಾಣಿಯನ್ನು ಅಡ್ಡಗಟ್ಟಿದ ನವೀನ್, ಆಕೆಯನ್ನು ಬಲವಂತವಾಗಿ ತನ್ನ ಕಾರಿನಲ್ಲಿ ಕೂರಿಸಿಕೊಂಡು ತೆರಳಿದ್ದಾನೆ. ಪ್ರಯಾಣದ ವೇಳೆ ರವಿ ಕುಮಾರ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸುವ 'ಡೆತ್‌ನೋಟ್' ಅನ್ನು ಆಕೆಯಿಂದ ಒತ್ತಾಯಪೂರ್ವಕವಾಗಿ ಬರೆಸಿದ್ದಾನೆ.
ಬಳಿಕ ಆಕೆಗೆ ಬಲವಂತವಾಗಿ ಕೀಟನಾಶಕವನ್ನು ಕುಡಿಸಿದ್ದಾನೆ. ಆಕೆಯ ಸ್ಥಿತಿ ಗಂಭೀರವಾಗುತ್ತಿದ್ದರೂ ತಕ್ಷಣ ಆಸ್ಪತ್ರೆಗೆ ದಾಖಲಿಸದೆ ಸತಾಯಿಸಿದ ಆತ, ನಂತರ ಆಕೆಯ ಮೊಬೈಲ್‌ನಿಂದಲೇ ತಂದೆಗೆ ಕರೆ ಮಾಡಿ "ಮಗಳು ಆತ್ಮಹತ್ಯೆಗೆ ಯತ್ನಿಸಿದ್ದಾಳೆ" ಎಂದು ಬಿಂಬಿಸಿದ್ದಾನೆ. ಕೊನೆಗೆ ಗೋದಾವರಿಖಾನಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಸೆಪ್ಟೆಂಬರ್ 13 ರಂದು ಚಿಕಿತ್ಸೆ ಫಲಕಾರಿಯಾಗದೆ ಅಕ್ಷಿತಾರಾಣಿ ಸಾವನ್ನಪ್ಪಿದ್ದಳು.
ಸಿಸಿಟಿವಿ, ಮೊಬೈಲ್ ಡಾಟಾದಿಂದ ಬಯಲಾದ ಕೃತ್ಯ:
ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳು, ಕಾಲ್ ಡಿಟೇಲ್ಸ್ (CDR) ಹಾಗೂ ಮೊಬೈಲ್ ಲೊಕೇಶನ್ ದಾಖಲೆಗಳನ್ನು ಪರಿಶೀಲಿಸಿದಾಗ ನವೀನ್ ಕುಮಾರ್ ಹೆಣೆದಿದ್ದ ಕಪಟ ನಾಟಕ ಬಯಲಾಗಿದೆ. ಸೆಪ್ಟೆಂಬರ್ 20 ರಂದು ನವೀನ್ ಹಾಗೂ ರವಿ ಕುಮಾರ್ ಇಬ್ಬರನ್ನೂ ಬಂಧಿಸಿ, ಕೃತ್ಯಕ್ಕೆ ಬಳಸಿದ ಕಾರು ಮತ್ತು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.
ಈ ಮಧ್ಯೆ, ಗಣಿ ತರಬೇತಿ ಸಂದರ್ಭದಲ್ಲಿ ರವಿ ಕುಮಾರ್ ಯುವತಿಗೆ ಕಿರುಕುಳ ನೀಡಿದ್ದ ಎಂಬ ಆರೋಪವೂ ಕೇಳಿಬಂದಿದ್ದು, ಆ ಆಯಾಮದಲ್ಲೂ ತನಿಖೆ ಮುಂದುವರಿದಿದೆ. ನಕಲಿ ಡೆತ್‌ನೋಟ್ ಬರೆಸಿ ಯೋಜಿತ ಹತ್ಯೆ ನಡೆಸಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಯುವತಿಯ ಕುಟುಂಬಸ್ಥರು ಹಾಗೂ ಸ್ಥಳೀಯರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
