ಗ್ರೇಟರ್ ನೋಯ್ಡಾ:
ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್ಪ್ರೆಸ್ವೇಯಲ್ಲಿ ಚಲಿಸುತ್ತಿದ್ದ ಡಬಲ್ ಡೆಕ್ಕರ್ ಸ್ಲೀಪರ್ ಬಸ್ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ, ಮಹಿಳೆ ಸೇರಿದಂತೆ ಕನಿಷ್ಠ ಒಂಬತ್ತು ಮಂದಿ ಪ್ರಯಾಣಿಕರು ಬೆಂಕಿಯ ಜ್ವಾಲೆಯಲ್ಲಿ ಸಿಲುಕಿ ಸಜೀವ ದಹನವಾಗಿರುವ ಭೀಕರ ದುರಂತ ಗುರುವಾರ ಮುಂಜಾನೆ ನಡೆದಿದೆ. ಘಟನೆಯಲ್ಲಿ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಿಟಕಿ ಗಾಜುಗಳನ್ನು ಒಡೆದು ಜಿಗಿದ ಪ್ರಯಾಣಿಕರು:
ಬಸ್ಸು ನೋಯ್ಡಾದಿಂದ ಮಹೋಬಾ ಕಡೆಗೆ ತೆರಳುತ್ತಿದ್ದಾಗ ಜೇವಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಯಮುನಾ ಎಕ್ಸ್ಪ್ರೆಸ್ವೇಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಬಸ್ಸಿನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.
ಬಸ್ ಹೊತ್ತಿ ಉರಿಯುತ್ತಿದ್ದಂತೆ ಗಾಬರಿಗೊಂಡ ಪ್ರಯಾಣಿಕರು ಪ್ರಾಣ ಉಳಿಸಿಕೊಳ್ಳಲು ಕಿಟಕಿ ಗಾಜುಗಳನ್ನು ಒಡೆದು ಹೊರಗೆ ಜಿಗಿದಿದ್ದಾರೆ. ಆದರೆ, ಬೆಂಕಿಯ ತೀವ್ರತೆಗೆ ಹೊರಬರಲು ಸಾಧ್ಯವಾಗದೆ ಒಳಭಾಗದಲ್ಲೇ ಸಿಲುಕಿಕೊಂಡ ಮಹಿಳೆ ಸೇರಿದಂತೆ 9 ಮಂದಿ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
