ಕೊರಗಜ್ಜ ಚಿತ್ರದ ಹಾಡುಗಳಿಗೆ ರೀಲ್ಸ್ ಸ್ಪರ್ಧೆ: ದೈವದ ಬಗ್ಗೆ ರೀಲ್ಸ್ ಅಲ್ಲ -ಸುಧೀರ್ ಅತ್ತಾವರ್


ಕೊರಗಜ್ಜ ಚಿತ್ರದ ಹಾಡುಗಳಿಗೆ ರೀಲ್ಸ್ ಸ್ಪರ್ಧೆ

ಕೊರಗಜ್ಜ ಚಿತ್ರದ ಹಾಡುಗಳಿಗೆ ರೀಲ್ಸ್ ಸ್ಪರ್ಧೆ: ದೈವದ ಬಗ್ಗೆ ರೀಲ್ಸ್ ಅಲ್ಲ -ಸುಧೀರ್ ಅತ್ತಾವರ್

ಮಂಗಳೂರು: ಹೊಸವರ್ಷದ ಶುಭಾರಂಭದಂದು 'ಸಾಂಗ್ಸ್ ಪ್ರೀಮಿಯರ್' ಎನ್ನುವ ವರ್ಣರಂಜಿತ ಕಾರ್ಯಕ್ರಮದಲ್ಲಿ ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿಯ "ಕೊರಗಜ್ಜ" ಚಿತ್ರದ ಎಲ್ಲಾ ಹಾಡುಗಳನ್ನು ನಮ್ಮ ಚಿತ್ರತಂಡ ಸುಮಾರು ಮುನ್ನೂರಕ್ಕೂ ಹೆಚ್ಚು ಆಡಿಯೋ ಪ್ಲಾಟ್ ಫಾರ್ಮ್ ಗಳಲ್ಲಿ ಝೀ ಮ್ಯೂಜಿಕ್ ಮುಖೇನ ಹರಿಯಬಿಟ್ಟಿತ್ತು.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಹಾಲಿಡೇ ಇನ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಾವು ಚಿತ್ರದ ಹಾಡುಗಳಿಗೆ ರೀಲ್ಸ್ ಸ್ಪರ್ಧೆಯನ್ನು ಘೋಷಿಸಿದ್ದೆವೆಯೇ ಹೊರತು, ತ್ರಿವಿಕ್ರಮ ಸಪಲ್ಯ ನಿರ್ಮಾಣ ದಲ್ಲಿರುವ "ಕೊರಗಜ್ಜ" ಚಿತ್ರದ ದೈವದ ಬಗ್ಗೆ ರೀಲ್ಸ್ ಮಾಡಿ ಎಂದು ಹೇಳಿಲ್ಲ.
ನಮ್ಮ ಮಾತನ್ನು ಕರ್ನಾಟಕದ ಕೆಲ ಭಾಗಗಳಲ್ಲಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಿನಿಮಾದ ನಿರ್ದೇಶಕ ಸುಧೀರ್ ಅತ್ತಾವರ ತಿಳಿಸಿದ್ದಾರೆ.

ರೀಲ್ಸ್ ಸ್ಪರ್ಧೆಯ ಬಗ್ಗೆ ಸ್ಪಷ್ಟೀಕರಣ

ರೀಲ್ಸ್ ಎಂದರೆ ವೀಡಿಯೋ ತುಣುಕುಗಳು. ಈಗಾಗಲೇ ದೈವಗಳ ಬಗ್ಗೆ ಮತ್ತು ದೈವದ ಆರಾಧನಾ ಕ್ರಮಗಳಾದ ಕೋಲ, ನೇಮ, ತಂಬಿಲ, ಅಗೆಲು...ಹೀಗೆ ದೈವದ ವಿಚಾರವಾಗಿ ಸಹಸ್ರಾರು ರೀಲ್ಸ್ ಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ಹಾಗಿರುವಾಗ ಚಿತ್ರದ ಹಾಡುಗಳಿಗೆ ರೀಲ್ಸ್ ಸ್ಪರ್ಧೆ ಏರ್ಪಡಿಸಿದರೆ ತಪ್ಪೇನು? ಈದಾಗ್ಯೂ ಅಶ್ಲೀಲ, ಅಸಂಬದ್ದ ಮತ್ತು ಅಪಹಾಸ್ಯ ಮಾಡುವ ರೀತಿಯ ರೀಲ್ಸ್ ಗಳ ವಿರುದ್ಧ ಕಾನೂನು ಕ್ರಮ ಎದುರಿಸಬೇಕಾದೀತು ಎನ್ನುವ ಎಚ್ಚರಿಕೆಯನ್ನು ನಾವೀಗಾಗಲೇ ಕೊಟ್ಟಿದ್ದೇವೆ ಎಂದು ಸುಧೀರ್ ಅತ್ತಾವರ ತಿಳಿಸಿದ್ದಾರೆ.

ಶೂಟಿಂಗ್ ಸಮಯದ ಘಟನೆಗಳು

ನಾವು ಕಳಸ ದಲ್ಲಿ ಶೂಟಿಂಗ್ ಮಾಡಿದಾಗ, ದೈವ ನರ್ತಕರೇ ಲಾಂಗು- ಮಚ್ಚು ತಂದು ಬೆದರಿಸಿ, ಶೂಟಿಂಗ್ ನಿಲ್ಲಿಸಿ, ಇಲ್ಲದ ರಗಳೆ ಮಾಡಿ ಲಕ್ಷಾಂತರ ರುಪಾಯಿ ನಷ್ಟ ಮಾಡಿದ್ದರು.
ಪ್ರತೀ ಬಾರಿ "ಕತ್ತಲೆ" ಯ ಹೆಸರನ್ನು ಹೇಳಿ ಬೆದರಿಸುತ್ತಿದ್ದರು. ಮೂರು ಭಾರಿ ರೌಡಿಗಳ ಧಾಳಿ ಆದಾಗೆಲ್ಲ ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿಯ ಸಮಯಪ್ರಜ್ಞೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ.

ಪ್ರಸ್ತುತ ಆಕ್ಷೇಪಣೆಗಳು

ಈಗ ನಮ್ಮ ಹಾಡನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹಾಡುಗಳಿಗೆ ರೀಲ್ಸ್ ಮಾಡುವ ಸ್ಪರ್ಧೆಗೆ ಆಕ್ಷೇಪಣೆ ಒಡ್ಡುತ್ತಿದ್ದಾರೆ. ನಮ್ಮ ಸಿನಿಮಾಗೆ ಪ್ರತೀ ಹಂತದಲ್ಲೂ ತೊಂದರೆ ಕೊಡುವುದು, ಆಕ್ಷೇಪಣೆ ಮಾಡುವುದು, ವಿರೋಧಿಸುವುದು ಹೀಗೆ ನಡೆಯುತ್ತಲೇ ಬಂದಿದೆ.
ಆದರೆ ಕೊರಗಜ್ಜ ದೈವಾಶಿರ್ವಾದದಿಂದಲೇ ಇಂತಹ ಹಲವಾರು ಅಗ್ನಿ ಪರೀಕ್ಷೆಗಳನ್ನು ಧಾಟಿ ಈಗ ಚಿತ್ರ ಬಿಡುಗಡೆ ಮಾಡುವ ಹಂತಕ್ಕೆ ಬಂದಿದ್ದೇವೆ ಎಂದು ಸುಧೀರ್ ತಿಳಿಸಿದ್ದಾರೆ.