ಮಂಗಳೂರಿನಲ್ಲಿ ಅಪ್ರಾಪ್ತನಿಂದ ಸ್ಕೂಟರ್ ಸವಾರಿ: ಮಾಲಕನಿಗೆ 27,500 ರೂ ದಂಡ!
ಮಂಗಳೂರು: ಅಪ್ರಾಪ್ತನಿಗೆ ಸ್ಕೂಟರ್ ಚಲಾವಣೆಗೆ ಸ್ಕೂಟರ್ ನೀಡಿದ ಪೋಷಕರಿಗೆ ನ್ಯಾಯಾಲಯ 27,500 ರೂ ದಂಡ ವಿಧಿಸಿದೆ.
ಆಗಷ್ಟ್ 25 ರಂದು ಬಜಪೆ ಪೊಲೀಸ್ ಠಾಣೆಯ ಪಿಎಸ್‌ಐ ರವರು ಸಿಬ್ಬಂದಿಗಳೊಂದಿಗೆ ಸಾಯಂಕಾಲ 6-35 ಗಂಟೆಯ ಸಮಯಕ್ಕೆ ಬಜಪೆ ಪೇಟೆ ಎಂಬಲ್ಲಿ ವಾಹನ ತಪಾಸಣೆಯ ಮಾಡುತ್ತಿದ್ದ ಸಮಯ ಅಪ್ರಾಪ್ತ ತ್ರಿಪ್ಪಲ್ ರೈಡ್ ಮಾಡಿಕೊಂಡು ಬಂದಿದ್ದ. ಈ ಸ್ಕೂಟರನ್ನು ನಿಲ್ಲಿಸಿ ವಿಚಾರಿಸಿ ದಾಖಲಾತಿಗಳನ್ನು ಪರಿಶೀಲಿಸಿದಾಗ ಸ್ಕೂಟರನ್ನು ಅಪ್ರಾಪ್ತ ವಯಸ್ಸಿನ ಬಾಲಕನು ಚಲಾಯಿಸಿಕೊಂಡು ಬಂದಿದ್ದು, ಹಿಂಬದಿ ಸೀಟಿನಲ್ಲಿ ಇಬ್ಬರು ಸವಾರರು ಇರುತ್ತಾರೆ ಎಂದು ತಿಳಿದುಬಂದಿದೆ.
ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಸ್ಕೂಟರನ್ನು ಚಲಾಯಿಸಲು ಪೋಷಕರು ವಾಹನವನ್ನು ನೀಡಿರುವುದು ವಿಚಾರಣೆಯಲ್ಲಿ ದೃಢಪಟ್ಟಿರುತ್ತದೆ. ಈ ಆರೋಪದ ಕುರಿತು ಬಜಪೆ ಪೊಲೀಸರು ಕಲಂ 199ಎ, 194ಸಿ, 194ಡಿ, 130 ಜೊತೆಗೆ 177 ಐಎಮ್‌ವಿ ಆಕ್ಟ್ ಅಡಿಯಲ್ಲಿ ದೋಷರೋಪಣ ಪಟ್ಟಿಯನ್ನು ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು ದಿನಾಂಕ: 03-09-2025 ರಂದು ಸ್ಕೂಟರಿನ ಮಾಲಕರಿಗೆ 27500/- ದಂಢವನ್ನು ವಿಧಿಸಿರುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.