
ಕೆನರಾ ಪ್ರೌಢಶಾಲೆ ಡೊಂಗರಕೇರಿಯಲ್ಲಿ ಶಾಲಾ ಸಂಸತ್ತಿನ ಉದ್ಘಾಟನೆ
"ಶಿಕ್ಷಣ ಕೇವಲ ಪಠ್ಯಪಾಠದಲ್ಲಲ್ಲ, ಮೌಲ್ಯಗಳ ನೆಲೆಗಟ್ಟುವಿಕೆ ಮುಖ್ಯ": ಶಾಸಕ ಉಮಾನಾಥ ಕೋಟ್ಯನ್
ಮಂಗಳೂರು, ಜುಲೈ 16: “ವಿದ್ಯೆಯೆಂಬುದು ಕೇವಲ ಶಾಲೆಯ ಪಾಠಪುಸ್ತಕಗಳಿಗೆ ಸೀಮಿತವಲ್ಲ. ತಾವು ಮಾಡುವ ಪ್ರತಿಯೊಂದು ಕಾರ್ಯವೂ, ಅನುಭವವೂ ವಿದ್ಯಾರ್ಥಿಗೆ ಪಾಠವಾಗಬಹುದು. ಸಂಸ್ಕಾರ ನೀಡುವುದೇ ನಿಜವಾದ ಶಿಕ್ಷಣ. ಸಂಸ್ಕಾರ ಪಡೆದವನು ಮಾತ್ರ ನಿಜವಾದ ವಿದ್ಯಾವಂತನಾಗುತ್ತಾನೆ,” ಎಂದು ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಉಮಾನಾಥ ಕೋಟ್ಯನ್ ಹೇಳಿದರು.
ಅವರು ಕೆನರಾ ಪ್ರೌಢಶಾಲೆ ಮೈನ್, ಡೊಂಗರಕೇರಿಯಲ್ಲಿ ಶಾಲಾ ಸಂಸತ್ತಿನ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ದೀಪ ಬೆಳಗಿಸಿ ಮಾತನಾಡುತ್ತಿದ್ದರು.
“ಅಂಕ ಮತ್ತು ಪದವಿಗಳು ಕೇವಲ ಶಿಕ್ಷಣದ ಒಂದು ಭಾಗ; ಜೀವನದ ಸಂಪೂರ್ಣ ಪ್ರತಿಬಿಂಬ ಅಲ್ಲ. ವಿದ್ಯಾರ್ಥಿಯು ಬುದ್ಧಿವಂತಿಕೆಯನ್ನು ಉಪಯೋಗಿಸಿ ಇತರರನ್ನು ಬೆಳೆಸಲು ಪ್ರಯತ್ನಿಸಬೇಕು. ಅಹಂಕಾರ ರಹಿತ ವ್ಯಕ್ತಿತ್ವವೇ ಸಮಾಜಕ್ಕೆ ಹಿತಕರ. ನಾಯಕತ್ವ ಗುಣಗಳು ಬಾಲ್ಯದಲ್ಲೇ ಬೆಳೆಯಬೇಕು. ಆತ್ಮವಿಶ್ವಾಸ, ಧೈರ್ಯ ಮತ್ತು ಮಾನವೀಯತೆ ವಿದ್ಯಾರ್ಥಿ ದೆಸೆಯಲ್ಲಿ ಮೂಡಬೇಕು” ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಡಿ. ವಾಸುದೇವ್ ಕಾಮತ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ"ನಾಯಕತ್ವ, ಸರಳ ಜೀವನ ಶೈಲಿ, ಪರಿಶ್ರಮ ಹಾಗೂ ಪ್ರಾಮಾಣಿಕತೆ ಯಥಾರ್ಥ ಸಾಧನೆಯ ಕೀಲಿಕೈಗಳಾಗಿವೆ. ಶಾಲಾ ಹಂತದಿಂದಲೇ ಈ ಮೌಲ್ಯಗಳನ್ನು ಅಳವಡಿಸಿಕೊಂಡರೆ ಭವಿಷ್ಯದಲ್ಲಿ ವಿದ್ಯಾರ್ಥಿಗಳು ಶ್ರೇಷ್ಠ ನಾಗರಿಕರಾಗುತ್ತಾರೆ" ಎಂದು ಸಲಹೆ ನೀಡಿದರು.
ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅರುಣ ಕುಮಾರಿ ಅವರು ಶಾಲಾ ಸಂಸತ್ತಿನ ನೂತನ ಮಂತ್ರಿಮಂಡಲದ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಖಜಾಂಚಿ ಸಿಎ ವಾಮನ್ ಕಾಮತ್, ಕೆನರಾ ವಿಕಾಸ ಶಿಕ್ಷಣ ಸಂಸ್ಥೆಯ ಸಂಯೋಜಕರಾದ ಬಸ್ತಿ ಪುರುಷೋತ್ತಮ್ ಶೆಣೈ, ಹಾಗೂ ಶಾಲೆಯ ಸಂಚಾಲಕಿ ಅಶ್ವಿನಿ ಕಾಮತ್, ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಅರುಣಾಕುಮಾರಿ, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗ, ಶಿಕ್ಷಕರಕ್ಷಕ ಸಂಘದ ಪದಾಧಿಕಾರಿಗಳು, ಪೋಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರೂಪಣೆಯನ್ನು ವಿದ್ಯಾರ್ಥಿನಿ ಆಂಚಲ್ ನೆರವೇರಿಸಿದರು, ಲಾವಣ್ಯ ಸ್ವಾಗತಿಸಿದರೆ, ಮಹಮ್ಮದ್ ಮಾಜಿನ್ ವಂದಿಸಿದರು.