ಟ್ರೈಲರ್ ನಲ್ಲಿ ಕುತೂಹಲ ಕೆರಳಿಸಿರುವ “ಎಲ್ಟು ಮುತ್ತಾ” ಆ.1ಕ್ಕೆ ರಿಲೀಸ್!
ಮಂಗಳೂರು: “ಎಲ್ಟು ಮುತ್ತಾ ಎಂಬ ಕೊಡಗಿನ ಹಿನ್ನಲೆಯುಳ್ಳ ಕನ್ನಡ ಚಲನಚಿತ್ರವು ಹೈ ಫೈವ್ ಸ್ಟುಡಿಯೋಸ್ ಮತ್ತು ಎಸಿಇ 22 ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿಡುಗಡೆಗೆ ಸಿದ್ಧಗೊಂಡಿದ್ದು ಇದರ ಟೀಸರ್ ನವಿಲು ಮತ್ತು ಕಾಳಿಂಗ ಹಾವಿನ ಕಥೆ ಹೇಳಿ ಬಹಳ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಾ ಇದೆ. ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ಆಡಿಯೋ ಲಾಂಚ್ ಕಾರ್ಯಕ್ರಮ ನಡೆದಿದ್ದು ಸಿನಿಮಾದ ಟ್ರೈಲರ್ ಯೂಟ್ಯೂಬ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಸಿನಿಮಾದ ಕಥಾವಸ್ತುವನ್ನು ತೆರೆಯ ಮೇಲೆ ತರಲು ನಿರ್ದೇಶಕ ರಾ ಸೂರ್ಯ ಬಹಳಷ್ಟು ಶ್ರಮವಹಿಸಿದ್ದಾರೆ“ ಎಂದು ಖ್ಯಾತ ನಟ ನವೀನ್ ಡಿ. ಪಡೀಲ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಬಳಿಕ ಮಾತಾಡಿದ ನಟ ಶೌರ್ಯಪ್ರತಾಪ್ ಅವರು, ”ಸಿನಿಮಾದ ಟೀಸರ್ ಅನ್ನು ನೋಡಿದ ಗಾಂಧಿನಗರದ ಮಂದಿ ಮತ್ತು ಕನ್ನಡ ಸಿನಿಪ್ರಿಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಾನು ಮುಖ್ಯ ಪಾತ್ರದಲ್ಲಿ ನಟಿಸುವ ಜೊತೆಗೆ ಸಹ ಬರವಣಿಗೆ ಮತ್ತು ಸಹ ನಿರ್ದೇಶನದಲ್ಲಿ ಕೂಡ ಸಾಥ್ ಕೊಟ್ಟಿದ್ದೇನೆ. ಇತರೆ ಭಾಷೆಗಳಿಂದ ಡಬ್ಬಿಂಗ್ ಗಾಗಿ ಬೇಡಿಕೆಯ ಕರೆ ಬಂದಿದೆ“ ಎಂದರು.
ಸತ್ಯ ಶ್ರೀನಿವಾಸನ್ ಮತ್ತು ಪವೀಂದ್ರ ಮುತ್ತಪ್ಪ ನಿರ್ಮಾಣದ ಜೊತೆಗೆ ಇಡಿ ತಂಡವನ್ನು ಮುನ್ನೆಡೆಸುತ್ತಿದ್ದಾರೆ. ಅದ್ಭುತವಾದ ಸಂಗೀತವನ್ನು ನೀಡುವದರ ಮೂಲಕ ಹೊಸ ಛಾಪನ್ನು ಮೂಡಿಸುವ ಭರವಸೆ “ಪ್ರಸನ್ನ ಕೇಶವ”ರವರದ್ದು, ರುಹಾನ್ ಆರ್ಯ, ಕಾಕ್ರೋಚ್ ಸುಧಿ, ನವೀನ್ ಪಡೀಲ್, ಪ್ರಿಯಾಂಕಾ ಮಳಲಿ , ರಾಮ್ , ಧನು ದೇವಯ್ಯ , ಸಮ್ರಾಟ್, ಪ್ರಶಾಂತ್, ತಾರಕ್, ಅವಿರೇಶ್, ಜೋಗಿ ರವಿ, ಇತರರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮೇಯಪ್ಪ ಭಾಸ್ಕರ್ ಕ್ಯಾಮೆರಾಮನ್, ಕೆ ಯೇಸು ವಿನ ಸಂಕಲನವಿದೆ. ಇದರಲ್ಲಿ 5 ಹಾಡುಗಳಿದ್ದು ಹೈ 5 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಲಭ್ಯವಿದೆ. ಸುಮಾರು 75 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತಿದ್ದೇವೆ ಎಂದು ನಿರ್ಮಾಪಕ ಸತ್ಯ ಶ್ರೀನಿವಾಸನ್ ಹೇಳಿದರು.