-->
ಆರತಿಯನ್ನು ಒಂದು ಕೈಯಿಂದ ಸ್ವೀಕರಿಸಬೇಕೆನ್ನುವುದು ಹೇಗೆ ಗೊತ್ತಾ? - ಸರಿಯಾದ ವಿಧಾನ ಹೀಗಿದೆ ನೋಡಿ

ಆರತಿಯನ್ನು ಒಂದು ಕೈಯಿಂದ ಸ್ವೀಕರಿಸಬೇಕೆನ್ನುವುದು ಹೇಗೆ ಗೊತ್ತಾ? - ಸರಿಯಾದ ವಿಧಾನ ಹೀಗಿದೆ ನೋಡಿ



ಬೆಂಗಳೂರು: ದೇವರಿಗೆ ಮಂಗಳಾರತಿಯನ್ನು ಎತ್ತುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ಆರತಿಯನ್ನು ಸ್ವೀಕಾರ ಹೇಗೆ ಮಾಡಬೇಕು ಎಂಬುವುದು ಬಹುತೇಕರಿಗೆ ತಿಳಿದಿಲ್ಲ. ಸಾಮಾನ್ಯವಾಗಿ ಎಲ್ಲರೂ ಆರತಿಯನ್ನು ಎರಡೂ ಕೈಗಳಿಂದ ತೆಗೆದುಕೊಂಡು ತಲೆಯ ಮೇಲೆ ಮತ್ತು ಕಣ್ಣಿಗೆ ಒತ್ತಿಕೊಳ್ಳುವುದು ಸಾಮಾನ್ಯ. ಆದರೆ ಇದು ತಪ್ಪು ಎನ್ನುತ್ತದೆ ಹಿಂದೂ ಶಾಸ್ತ್ರ. ಸ್ಕಂದ ಪುರಾಣದಲ್ಲಿ ಉಲ್ಲೇಖ ಆಗಿರುವಂತೆ ಹಾಗೂ ವರಾಹದೇವರು ತಿಳಿಸಿರುವ ಪ್ರಕಾರ ಆರತಿಯನ್ನು ಒಂದೇ ಕೈಯಿಂದ ತೆಗೆದುಕೊಳ್ಳಬೇಕು. ಅದಕ್ಕೆ ಹಿಂದೂ ಪುರಾಣದಲ್ಲಿ ಒಂದು ಶ್ಲೋಕವೂ ಇದೆ. ಅದೇನೆಂದರೆ

ಆರ್ತಿಕ್ಯಗ್ರಹಣೇ ಕಾಲೇ ಏಕಹಸ್ತೇನ ಯೋಜಯೇತ್ |
ಯದಿ ಹಸ್ತ ದ್ವಯೇನೈವ ಮಮ ದ್ರೋಹೀ ನ ಸಂಶಯ: ||
ಇದರ ಅರ್ಥ ಮಂಗಳಾರತಿಯನ್ನು ಎರಡು ಕೈಗಳಿಂದ ಸ್ವೀಕಾರ ಮಾಡಬಾರದು. ಆರತಿಯನ್ನು ಬಲ ಕೈಯಿಂದ ಮಾತ್ರ ತೆಗೆದು ಕೊಳ್ಳಬೇಕು. ಈ ವಿಷಯವನ್ನು ವರಾಹದೇವರು ತನ್ನ ಪತ್ನಿಗೆ ತಿಳಿಸುತ್ತಾನೆ. 

ಹಾಗಿದ್ದರೆ ಆರತಿ ತೆಗೆದುಕೊಳ್ಳುವ ಸರಿಯಾದ ಕ್ರಮ ಯಾವುದು ಎನ್ನುವುದು ಹೀಗಿದೆ: ಆರತಿಯನ್ನು ಬಲಗೈಯಿಂದ ದೀಪದ ಮೇಲಿನಿಂದ ತೆಗೆದುಕೊಂಡು ಮೊದಲು ಅದನ್ನು ತಲೆಗೆ ತೆಗೆದುಕೊಂಡು, ಆಮೇಲೆ ಹೃದಯ, ಆಮೇಲೆ ನಾಭಿಯ ಎಡಭಾಗದಲ್ಲಿ ತೆಗೆದುಕೊಳ್ಳಬೇಕು. ಹೀಗೆ ಮಾಡುವುದರ ಹಿಂದೆ ಅರ್ಥವೂ ಇದೆ. ಅದೇನೆಂದರೆ, ಶಿರದಲ್ಲಿ ಇರುವ ಅಮೃತವನ್ನು ಹೃದಯಕ್ಕೆ ತಂದು, ಹೃದಯದಲ್ಲಿ ಇರುವ ಅಗ್ನಿಯನ್ನು ನಾಭಿಯ ಎಡಭಾಗದಲ್ಲಿ ಇರುವ ಪಾಪಪುರುಷನಲ್ಲಿ ಸುಡಬೇಕು ಎನ್ನುವುದು. ಅಲ್ಲಿಗೆ ನಮ್ಮ ದೇಹ ಶುದ್ಧಯಾದಂತೆ ಎಂದು ಹೇಳಲಾಗುತ್ತದೆ. ಆರತಿಯನ್ನು ಮಾಡುವಾಗ ಓಂ ಆಕಾರ ಬರುವ ರೀತಿಯಲ್ಲಿ ಕೈಯನ್ನು ತಿರುಗಿಸಬೇಕು. ನಮ್ಮ ಎಡಭಾಗದಿಂದ ಆರಂಭಿಸಿ ಬಲಭಾಗದ ವರೆಗೆ ತರಬೇಕು, ಮೊದಲು ದೇವರ ಪಾದಗಳಿಗೆ ನಾಲ್ಕುಬಾರಿ, ನಾಭಿಯ ಬಳಿ ಎರಡು ಬಾರಿ, ಮುಖದ ಬಳಿ ಒಂದು ಸಾರಿ ಆರತಿ ಮಾಡಬೇಕು ಆನಂತರ ಮೂರ್ತಿಯ ಬಳಿ ಏಳು ಬಾರಿ ದುಂಡಾಕಾರವಾಗಿ ಆರತಿ ಬೆಳಗಬೇಕು. ಆರತಿಯಾದ ಬಳಿಕ ತಟ್ಟೆಯ ನಾಲ್ಕು ಕಡೆಗೆ ಜಲವನ್ನು ಪ್ರೋಕ್ಷಿಸಬೇಕು ಇದರಿಂದ ಆರತಿ ಶಾಂತವಾಗುತ್ತದೆ.

ಆರತಿ ಮಾಡುವುದನ್ನು ನೋಡುವುದರಿಂದ ಏಕಾಗ್ರತೆ ಸಿಧ್ದಿಸುವುದಲ್ಲದೆ ಅಂತಹ ಆರತಿಯ ಮೇಲೆ ನಮ್ಮ ಬಲ ಅಂಗೈಯನ್ನು ಸ್ವಲ್ಪಹೊತ್ತು ಹಿಡಿದರೆ ಶಾಖ ಅಂಗೈ ಮೂಲಕ ಪ್ರವೇಶವಾಗಿ ’ನರವ್ಯೂಹ’ ಹೆಚ್ಚು ಕ್ರಿಯಾಶೀಲವಾಗುತ್ತದೆ. ಜೊತೆಗೆ ಅಂಗೈನಲ್ಲಿ ಇರಬಹುದಾದ ಎಲ್ಲಾ ಕ್ರಿಮಿಕೀಟಗಳು ನಾಶವಾಗುತ್ತದೆ ಎನ್ನುವ ವೈಜ್ಞಾನಿಕ ಕಾರಣವೂ ಇದರ ಹಿಂದಿದೆ. ಅಷ್ಟಕ್ಕೂ, ಹಿಂದೂ ಧರ್ಮದಲ್ಲಿ ನಡೆದುಕೊಂಡು ಬಂದ ಹಲವು ಪರಂಪರೆ, ವಿಧಿ-ವಿಧಾನಗಳಲ್ಲಿ ಆರತಿಯೂ ಒಂದು. ಸ್ಕಂದ ಪುರಾಣದಲ್ಲೂ ಇದಕ್ಕೆ ವಿಶೇಷ ಮಹತ್ವವಿರುವುದರ ಬಗ್ಗೆ ಉಲ್ಲೇಖವಿದೆ. ಪೂಜೆ, ಹೋಮ-ಹವನಗಳಲ್ಲಿ, ಅನುಷ್ಠಾನದ ಕೊನೆಯಲ್ಲಿ ಒಂದು ತಟ್ಟೆಯಲ್ಲಿ ದೀಪವನ್ನು ಇಟ್ಟು ಬೆಳಗುತ್ತೇವೆ. ಎಷ್ಟು ಭಕ್ತಿ-ಶ್ರದ್ಧೆಗಳಿಂದ ಆರತಿ ಮಾಡುತ್ತೇವೆಯೋ ಅದಕ್ಕೆ ಅಷ್ಟೇ ಫಲವಿದೆ. ಆ ಸಮಯದಲ್ಲಿ ಸಕಾರಾತ್ಮಕ ಶಕ್ತಿ ನಮ್ಮನ್ನು ಆವರಿಸುತ್ತದೆ. ವ್ಯಕ್ತಿತ್ವದಲ್ಲಿ ಹೊಸ ತೇಜಸ್ಸನ್ನು ಕಾಣಬಹುದು. ಯಾವುದೇ ಮಂತ್ರ, ಪೂಜಾ ವಿಧಾನಗಳು ತಿಳಿಯದಿದ್ದರೂ ಆರತಿಯನ್ನು ಶ್ರದ್ಧೆಯಿಂದ ಮಾಡಿದಾಗ ದೇವರು ಪ್ರಸನ್ನನಾಗಿ ಪೂಜೆಯನ್ನು ಸ್ವೀಕರಿಸುತ್ತಾನೆ ಎಂದು ಸ್ಕಂದ ಪುರಾಣ ಹೇಳುತ್ತದೆ. ಹಲವು ಬಗೆಯಲ್ಲಿ ಆರತಿಯನ್ನು ಮಾಡುತ್ತೇವೆ, ಪ್ರತಿ ಆರತಿಗೂ ಅದರದ್ದೇ ವಿಶೇಷತೆ ಇರುತ್ತದೆ. 

 ಎಲ್ಲಕ್ಕಿಂತಲೂ ಹೆಚ್ಚಾಗಿ ತುಪ್ಪದ ಆರತಿ ಶ್ರೇಷ್ಠ ಎಂದು ಹೇಳಲಾಗುತ್ತದೆ.  ತುಪ್ಪದಾರತಿಯು ಆತ್ಮದ ಜ್ಯೋತಿಯ ಪ್ರತೀಕ. ಅಂತರ್ಮನದಿಂದ ದೇವರಿಗೆ ಆರತಿ ಮಾಡಿದರೆ ಅದು ಪಂಚಾರತಿ ಆಗುತ್ತದೆ. ಒಂದರಿಂದ ಐದು ಬಾರಿ ಆರತಿ ಮಾಡಬಹುದಾಗಿದೆ. ವಿಶೇಷ ಸಂದರ್ಭಗಳನ್ನು ಹೊರತುಪಡಿಸಿದರೆ, ಪ್ರತಿ ನಿತ್ಯ ಮನೆಯಲ್ಲಿ ಎರಡು ಬಾರಿ ಆರತಿಯನ್ನು ಮಾಡಬಹುದು. ಒಂದು ಪ್ರಾತಃಕಾಲ ಪೂಜಾ ಸಮಯದಲ್ಲಿ, ಇನ್ನೊಂದು ಸಂಧ್ಯಾಕಾಲದಲ್ಲಿ ಮಾಡಬಹುದಾಗಿದೆ. ವಿಶೇಷ ಸಂದರ್ಭಗಳಲ್ಲಿ ಐದು ವಸ್ತುಗಳಿಂದ ಆರತಿಯನ್ನು ಮಾಡುತ್ತೇವೆ. ಧೂಪ, ದೀಪ, ಶುಭ್ರ ವಸ್ತ್ರದಿಂದ, ಕರ್ಪೂರದಿಂದ ಮತ್ತು ನೀರಿನಿಂದ ಆರತಿಯನ್ನು ಮಾಡುತ್ತಾರೆ.

Ads on article

Advertise in articles 1

advertising articles 2

Advertise under the article