ನವದೆಹಲಿ:ಬಾಂಗ್ಲಾದೇಶದಲ್ಲಿ ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆನ್ನುವ ಆಗ್ರಹ  ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ವಿಪಕ್ಷಗಳ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
'ಬಾಯ್ಕಾಟ್ ಇಂಡಿಯಾ' ಅಭಿಯಾನದ ಬಗ್ಗೆ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಯಾವ ನೈತಿಕತೆಯ ಮೇಲೆ ವಿಪಕ್ಷಗಳು ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಆಗ್ರಹಿಸುತ್ತಿವೆ. ಬಾಯ್ಕಾಟ್ ಇಂಡಿಯಾ ಎಂದು ಹೇಳುವವರ ಪತ್ನಿಯರಲ್ಲಿ ಎಷ್ಟು ಮಂದಿ ಭಾರತದಿಂದ ತರಿಸಲಾದ ಸೀರೆಗಳನ್ನು ಉಟ್ಟಿದ್ದಾರೆ. ಒಂದು ವೇಳೆ ಭಾರತದಿಂದ ಆಮದು ಮಾಡಲಾದ ಸೀರೆಗಳನ್ನು ಉಟ್ಟುಕೊಂಡರೆ ಯಾಕೆ ಅದನ್ನು ಸುಟ್ಟು ಹಾಕದೆ ಹಾಗೆಯೇ ಬಿಟ್ಟಿದ್ದಾರೆ. ಆದ್ದರಿಂದ ಬಾಯ್ಕಾಟ್ ಇಂಡಿಯಾ ಎನ್ನುವವರು ಮೊದಲು ತಮ್ಮ ಪತ್ನಿಯರ ಸೀರೆಗಳನ್ನು ಸುಟ್ಟು ಹಾಕಲಿ. ಆ ಬಳಿಕ ಮಾತನಾಡಿ ಎಂದಿದ್ದಾರೆ.
ಅಲ್ಲದೆ ಬಾಯ್ಕಾಟ್ ಇಂಡಿಯಾ ಹೇಳುವವರು ತಮ್ಮ ಆಹಾರದಲ್ಲಿ ಭಾರತೀಯ ಖಾದ್ಯವಿಲ್ಲದೇ ಊಟ ಮಾಡುತ್ತಿದ್ದಾರೆಯೇ ಎಂಬುದನ್ನು ಮೊದಲು ಜನರಿಗೆ ತಿಳಿಸಿ ಆ ಬಳಿಕ ಅಭಿಯಾನ ನಡೆಸಲಿ. ಒಂದು ವೇಳೆ ಅವರು ತಾವು ಸೇವಿಸುವ ಆಹಾರದಲ್ಲಿ ಭಾರತೀಯ ಖಾದ್ಯವಿದ್ದರೆ ಊಟ ಮಾಡುವುದನ್ನೇ ನಿಲ್ಲಿಸುತ್ತಾರೆಯೇ ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ವಿಪಕ್ಷಗಳಿಗೆ ತಮ್ಮ ಮಾತಿನ ಮೂಲಕ ಚಾಟಿ ಬೀಸಿದ್ದಾರೆ.
ಜನವರಿಯಲ್ಲಿ ನಡೆದ ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷವು 299 ಕ್ಷೇತ್ರಗಳ ಪೈಕಿ 216ರಲ್ಲಿ ಪ್ರಚಂಡ ದಿಗ್ವಿಜಯ ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿತ್ತು. ಈ ಸಂದರ್ಭದಲ್ಲಿ ವಿಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದವು. ಫಲಿತಾಂಶ ಪ್ರಕಟವಾದ ಬಳಿಕ ಬಾಯ್ಕಾಟ್ ಇಂಡಿಯಾ ಅಭಿಯಾನವನ್ನು ಆರಂಭಿಸಿ ಟೀಕೆಗೆ ಗುರಿಯಾಗಿವೆ.
 
 
 
 
 
 
 
 
 
 
 
 
 
 
 
 
 
 
