-->

campaign for Kannada as Judicial language begins | ನ್ಯಾಯಾಲಯದಲ್ಲಿ ಕನ್ನಡ ಬಳಕೆ: ಬೆನೆಗಲ್ ನೆನಪಲ್ಲಿ ಶುರುವಾಗಿದೆ ಅಭಿಯಾನ

campaign for Kannada as Judicial language begins | ನ್ಯಾಯಾಲಯದಲ್ಲಿ ಕನ್ನಡ ಬಳಕೆ: ಬೆನೆಗಲ್ ನೆನಪಲ್ಲಿ ಶುರುವಾಗಿದೆ ಅಭಿಯಾನ



ಕರ್ನಾಟಕದ ಅನರ್ಘ್ಯ ರತ್ನ ಸರ್ ಬೆನಗಲ್ ನರಸಿಂಗ ರಾವ್ ಅವರ ಜನ್ಮದಿನವಾದ ಇಂದು ದಿನಾಂಕ 26.2.2021ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರಾಜ್ಯದ ನ್ಯಾಯಾಲಯಗಳಲ್ಲಿ ಕನ್ನಡ ಬಳಕೆ ಅಭಿಯಾನಕ್ಕಾಗಿ ಚಾಲನೆ ನೀಡಲಾಗಿದೆ.


ಕನ್ನಡ ಅಭಿವೃದ್ಧಿ ಪ್ರಾಧಿಕಾರವು 1.11.2020 ರಿಂದ 31.10.2021 ರ ವರೆಗೆ ಕನ್ನಡ ಕಾಯಕ ವರ್ಷ ಹಮ್ಮಿಕೊಂಡಿದ್ದು ನ್ಯಾಯಾಂಗ ಆಡಳಿತ; ಶಿಕ್ಷಣ; ವಾಣಿಜ್ಯ ಹೀಗೆ ಎಲ್ಲಾ ಸಾರ್ವಜನಿಕ ಕ್ಷೇತ್ರಗಳಲ್ಲಿ ರಾಜ್ಯದ ಆಡಳಿತ ಭಾಷೆಯಾದ ಕನ್ನಡವನ್ನು ಸಂಪೂರ್ಣ ಜಾರಿಗೆ ತರುವ ಕಾರ್ಯಕ್ಕೆ ಪುನಶ್ಚೇತನ ತುಂಬುವುದು ಅದರ ಗುರಿಯಾಗಿದೆ. ರಾಜ್ಯಾದ್ಯಂತ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರು ಮತ್ತು ಜಿಲ್ಲಾ, ನಗರಸಭೆ, ತಾಲ್ಲೂಕು ಕನ್ನಡ ಜಾಗೃತಿ ಸದಸ್ಯರುಗಳ ಮೂಲಕ ಈ ಕಾಯ೯ವನ್ನು ಮಾಡಲಾಗುತ್ತಿದೆ.


ಸರಕಾರದ ಸುತ್ತೋಲೆ ಸಂಖ್ಯೆ ಎಲ್. ಸಿ.ಎ . 1-2001-2002 ದಿನಾಂಕ 26.3.203 ರ ಪ್ರಕಾರ ರಾಜ್ಯದ ಅಧೀನ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ಅರ್ಜಿ ಸಲ್ಲಿಸುವುದು; ಕನ್ನಡದ ನಮೂನೆಗಳನ್ನು ಬಳಸುವುದು; ವಕೀಲರು ವಾದವನ್ನು ಕನ್ನಡದಲ್ಲಿಯೇ ಮಂಡಿಸುವುದು; ಮತ್ತು ನ್ಯಾಯಾಧೀಶರು ತೀರ್ಪುಗಳನ್ನು ಕನ್ನಡದಲ್ಲಿಯೇ ನೀಡಲು ಸೂಚಿಸಲಾಗಿದೆ. ಪ್ರಸ್ತುತ ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಾಧೀಶರುಗಳು ಕನ್ನಡದಲ್ಲಿಯೇ ತೀರ್ಪನ್ನು ನೀಡುತ್ತಿದ್ದಾರೆ. ಅವರೆಲ್ಲರೂ ಅಭಿನಂದನಾಹ೯ರು. ಆದರೂ ಅಧೀನ ನ್ಯಾಯಾಲಯಗಳಲ್ಲಿ ಕನ್ನಡದ ಬಳಕೆ ಪೂರ್ಣ ಪ್ರಮಾಣದಲ್ಲಿ ಆಗಿರುವುದಿಲ್ಲ. ಅದನ್ನು ಪೂರ್ಣಪ್ರಮಾಣದಲ್ಲಿ ಸಾಕಾರಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.


ಫೆಬ್ರವರಿ 26 ಸರ್ ಬೆನಗಲ್ ನರಸಿಂಗ ರಾವ್ ಅವರ ಜನ್ಮದಿನ. ಮಂಗಳೂರಿನಲ್ಲಿ ಜನಿಸಿದ ಸರ್ ಬಿ.ಎನ್. ರಾವ್ ಐಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಭಾರತಕ್ಕೆ ಮರಳಿ ಬ್ರಿಟಿಷರು ಬರೆದ ಭಾರತದ ವಿವಿಧ ಕಾನೂನು ಸಂಹಿತೆಯನ್ನು ಭಾರತದ ಪರಿಸ್ಥಿತಿಗೆ ಅನುಗುಣವಾಗಿ ಪರಿಷ್ಕರಿಸಿ ಹೊಸತಾಗಿ ಬರೆದು ಆ ಮಹತ್ಕಾರ್ಯಕ್ಕೋಸ್ಕರ ನೀಡಿದ *ಸರ್* ಎಂಬ ಬಿರುದನ್ನು ತಮ್ಮ ಹೆಸರಿನ ಹಿಂದೆ ಸಂಪಾದಿಸಿದರು. 


 ಬ್ರಿಟಿಷ್ ಭಾರತದ ಸಂವಿಧಾನ ಆಗಿದ್ದ *ಗೌರ್ನಮೆಂಟ್ ಆಫ್ ಇಂಡಿಯಾ ಆಕ್ಟ್ 1935* ಹಾಗೂ ಸ್ವತಂತ್ರ ಭಾರತದ *ಸಂವಿಧಾನ ರಚನೆಯಲ್ಲಿ* ಮಹತ್ವದ ಪಾತ್ರ ನಿರ್ವಹಿಸಿದರು. ಕಲ್ಕತ್ತಾ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ; ಜಮ್ಮುಕಾಶ್ಮೀರದ ಪ್ರಧಾನ ಮಂತ್ರಿಗಳಾಗಿ; ವಿಶ್ವಸಂಸ್ಥೆಯ ಭದ್ರತಾ ಕೌನ್ಸಿಲ್ ನ ಅಧ್ಯಕ್ಷರಾಗಿ; ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾಗಿ ಭಾರತ ದೇಶದ ಕೀರ್ತಿ ವಲ್ಲರಿಯನ್ನು ದಿಶಾಂತರಗಳಲ್ಲಿ ಪಸರಿಸಿದರು.


ನ್ಯಾಯಾಂಗದಲ್ಲಿ ಕನ್ನಡದ ಪರಿಪೂರ್ಣ ಬಳಕೆಯನ್ನು ಆಗ್ರಹಿಸಿ ಇದಕ್ಕಾಗಿ ಕರ್ನಾಟಕದ ಜನತೆ ಸರ್ ಬಿ. ಎನ್. ರಾವ್ ಅವರ ಜನ್ಮ ದಿನವನ್ನು ಆಯ್ಕೆ ಮಾಡಿಕೊಂಡಿರುವುದು ಒಂದು ತಾತ್ವಿಕ; ಸಾತ್ವಿಕ ಮಹತ್ವವನ್ನು ನೀಡಿದೆ. ಇದು ನಮಗೆಲ್ಲರಿಗೂ ಅಭಿಮಾನದ ವಿಷಯವಾಗಿದೆ.


ಕನ್ನಡದಲ್ಲಿ ವಾದವನ್ನು ಮಾಡುವ; ಕನ್ನಡದಲ್ಲಿ ತೀರ್ಪು ನೀಡುವ; ನ್ಯಾಯಾಂಗ ಆಡಳಿತದಲ್ಲಿ ಕನ್ನಡವನ್ನೇ ಬಳಸುವ ಕಾಯಕವು ಈಗಾಗಲೇ ಆರಂಭವಾಗಿದ್ದು ಅದು ನಿರಂತರವಾಗಲಿ ಎಂಬುದು ಕರ್ನಾಟಕದ ಜನತೆಯ ಪ್ರೀತಿ ಪೂರ್ವಕ ಆಗ್ರಹವಾಗಿದೆ.


ನ್ಯಾಯ ದೇಗುಲ ನ್ಯಾಯದ ಪರವಾಗಿದೆ. ನ್ಯಾಯದ ತೀರ್ಪು ಕನ್ನಡ ಪರವಾಗಿದೆ ಎಂಬುದು ಎಲ್ಲರ ಹಾರೈಕೆ, ಆಶಯ.

Ads on article

Advertise in articles 1

advertising articles 2

Advertise under the article