ಲಕ್ನೋ: ಗಂಡನ ಮನೆ ತೊರೆದು ಪ್ರೇಮಿಯೊಂದಿಗೆ ಓಡಿಹೋಗಿದ್ದ ಪತ್ನಿಗೆ ಹಲವು ಗಂಟೆಗಳ ಕಾಲ ಬುದ್ಧಿವಾದ ಹೇಳಿ ಮನವೊಲಿಸಲು ಪ್ರಯತ್ನಿಸಿದ ಪತಿಯೊಬ್ಬ, ಆಕೆಯ ಹಠದ ಮುಂದೆ ಸೋತು ಕೊನೆಗೆ ಆಕೆಯ ಪ್ರೇಮಿಯೊಂದಿಗೆ ಮದುವೆ ಮಾಡಿಸಿಕೊಟ್ಟು ಔದಾರ್ಯ ಮೆರೆದ ಅಪರೂಪದ ಘಟನೆ ಉತ್ತರ ಪ್ರದೇಶದ ಮಾಲಿಹಾಬಾದ್‌ನಲ್ಲಿ ನಡೆದಿದೆ.
ಪ್ರಾಂತೀಯ ರಕ್ಷಕ ದಳದ (PRD) ಜವಾನನೊಬ್ಬನಿಗೆ ಕಳೆದ ವರ್ಷದ ಮೇ ತಿಂಗಳಲ್ಲಿ ವಿವಾಹವಾಗಿತ್ತು. ಆದರೆ ಕೆಲ ದಿನಗಳ ಹಿಂದೆ ಆತನ ಪತ್ನಿ ಮನೆಯವರಿಗೆ ಯಾರಿಗೂ ತಿಳಿಸದೆ ಏಕಾಏಕಿ ನಾಪತ್ತೆಯಾಗಿದ್ದಳು. ಎಲ್ಲ ಕಡೆ ಹುಡುಕಾಡಿದ ಪತಿ, ಪತ್ನಿ ಪತ್ತೆಯಾಗದಿದ್ದಾಗ ಮಾಲಿಹಾಬಾದ್ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರು ದಾಖಲಿಸಿದ್ದನು.
ಪ್ರೇಮಿಯೊಂದಿಗೆ ಠಾಣೆಗೆ ಹಾಜರಾದ ಪತ್ನಿ:
ಬುಧವಾರ ಈ ನಾಪತ್ತೆ ಪ್ರಕರಣ ಅನಿರೀಕ್ಷಿತ ತಿರುವು ಪಡೆದುಕೊಂಡಿತು. ನಾಪತ್ತೆಯಾಗಿದ್ದ ಮಹಿಳೆ ನೇರವಾಗಿ ತನ್ನ ಪ್ರೇಮಿಯೊಂದಿಗೆ ಠಾಣೆಗೆ ಹಾಜರಾಗಿದ್ದಳು. ವಿಚಾರಣೆ ವೇಳೆ, ಮದುವೆಗೂ ಮುನ್ನವೇ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು ಎಂಬುದು ಬಯಲಾಯಿತು.
ವಿಷಯ ತಿಳಿಯುತ್ತಿದ್ದಂತೆ ಪತಿ ಹಾಗೂ ಪತ್ನಿಯ ಎರಡೂ ಕುಟುಂಬಗಳ ಸದಸ್ಯರು ಪೊಲೀಸ್ ಠಾಣೆಗೆ ದೌಡಾಯಿಸಿದರು. ಗಂಟೆಗಳ ಕಾಲ ಆಕೆಗೆ ಬುದ್ಧಿವಾದ ಹೇಳಿ, ಸಂಸಾರವನ್ನು ಮುಂದುವರಿಸುವಂತೆ ಸಂಬಂಧಿಕರು ಹಾಗೂ ಪತಿ ಗೋಗರೆದರು. ಆದರೆ ಆಕೆ ಮಾತ್ರ ತನ್ನ ಪ್ರೇಮಿಯೊಂದಿಗೆ ಮಾತ್ರವೇ ಬಾಳುವುದಾಗಿ ಪಟ್ಟು ಹಿಡಿದು ನಿಂತಳು.
ಪತಿಯಿಂದ ಪರಸ್ಪರ ಒಪ್ಪಿಗೆ:
ಎಲ್ಲಾ ಮನವೊಲಿಕೆಯ ಪ್ರಯತ್ನಗಳು ವಿಫಲವಾದಾಗ, ಪತಿ ಆಕೆಯ ಹಠಮಾರಿತನ ಮತ್ತು ಇಷ್ಟಕ್ಕೆ ಮಣಿಯಲು ತೀರ್ಮಾನಿಸಿದನು. ಇಬ್ಬರೂ ಪರಸ್ಪರ ಸಮ್ಮತಿಯೊಂದಿಗೆ (Mutual Consent) ದಾಂಪತ್ಯ ಜೀವನವನ್ನು ಅಂತ್ಯಗೊಳಿಸಲು ಒಪ್ಪಿಕೊಂಡರು. ಬೇರ್ಪಡುವ ಮುನ್ನ ಆತ ಪತ್ನಿಗೆ, "ನೀನು ಆಯ್ಕೆ ಮಾಡಿಕೊಂಡಿರುವ ವ್ಯಕ್ತಿಯೊಂದಿಗೆ ಸದಾ ನಿಷ್ಠೆಯಿಂದ ಜೀವನ ನಡೆಸು" ಎಂದು ಹಾರೈಸಿ ಕಳುಹಿಸಿದನು.
ಠಾಣೆಯಿಂದ ಹೊರಬಂದ ಮಹಿಳೆ ಮತ್ತು ಆಕೆಯ ಪ್ರೇಮಿ ಸಮೀಪದ ದೇವಾಲಯಕ್ಕೆ ತೆರಳಿ ಪರಸ್ಪರ ಹಾರ ಬದಲಾಯಿಸಿಕೊಂಡು ಮದುವೆಯಾಗಿ ಜೊತೆಯಾಗಿ ತೆರಳಿದರು.
ಈ ಕುರಿತು ಮಾಹಿತಿ ನೀಡಿದ ಮಾಲಿಹಾಬಾದ್ ಪೊಲೀಸ್ ಇನ್‌ಸ್ಪೆಕ್ಟರ್ ಸುರೇಂದ್ರ ಭಾಟಿ, "ಎರಡೂ ಕುಟುಂಬಗಳು ಮಹಿಳೆಯ ನಿರ್ಧಾರವನ್ನು ಅಂತಿಮವಾಗಿ ಒಪ್ಪಿಕೊಂಡಿವೆ. ಇಬ್ಬರ ನಡುವಿನ ಸಮಸ್ಯೆಯು ಪರಸ್ಪರ ಒಪ್ಪಿಗೆಯಿಂದ ಇತ್ಯರ್ಥವಾಗಿದ್ದು, ಯಾವುದೇ ಕಡೆಯಿಂದಲೂ ದೂರು ದಾಖಲಾಗಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
