ಜನಸಾಮಾನ್ಯರಿಗೆ ನ್ಯಾಯ ಒದಗಿಸುವುದೇ ನ್ಯಾಯಾಲಯಗಳ ಕರ್ತವ್ಯ - ನ್ಯಾ. ಅಬ್ದುಲ್ ನಝೀರ್



ಮಂಗಳೂರು:ಜನಸಾಮಾನ್ಯರಿಗೆ ನ್ಯಾಯವನ್ನು ಒದಗಿಸುವುದಕ್ಕಾಗಿ   ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಇದು ಸಾಂವಿಧಾನಿಕವಾಗಿರುತ್ತದೆ ಎಂದು  ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ. ಅಬ್ದುಲ್  ನಝೀರ್  ಹೇಳಿದ್ದಾರೆ.
      ಅವರು ಶನಿವಾರ ಪುತ್ತೂರಿನಲ್ಲಿ ನೂತನ ನ್ಯಾಯಾಲಯ ಸಂಕೀರ್ಣ  ಉದ್ಘಾಟಿಸಿ  ಮಾತನಾಡಿದರು.
     ನ್ಯಾಯಾಲಯವು ಕಾನೂನಿನ ಆಡಳಿತದ ಸಂಕೇತವಾಗಿದ್ದು, ಸಮಾಜದಲ್ಲಿ ಅನ್ಯಾಯದ ವಿರುದ್ಧ ಪ್ರತಿಯೊಬ್ಬರಿಗೆ ನ್ಯಾಯ ಒದಗಿಸಲು ಕಾರ್ಯನಿರ್ವಹಿಸುತ್ತದೆ. ನ್ಯಾಯಾಲಯಗಳಿಗೆ ಆಧುನಿಕ  ಕಟ್ಟಡ  ಮತ್ತು ತಂತ್ರಜ್ಞಾನಗಳು ಜನರಿಗೆ  ತ್ವರಿತವಾಗಿ ನ್ಯಾಯ ಒದಗಿಸಲು ಪೂರಕ ಅಗತ್ಯಗಳಾಗಿದೆ ಎಂದು ಅವರು ಹೇಳಿದರು.  
     ಸಂವಿಧಾನ ರಚನೆ ಸಂದರ್ಭದಲ್ಲಿ  ದಕ್ಷಿಣ ಕನ್ನಡ ಜಿಲ್ಲೆಯ  ಬೆನಗಲ್ ನರಸಿಂಹರಾವ್  ಅವರು ಮಹತ್ತರ ಪಾತ್ರ ನಿರ್ವಹಿಸಿದ್ದು, ಸಂವಿಧಾನದಲ್ಲಿ ಹಲವು ಪ್ರಮುಖ ಅಂಶಗಳನ್ನು ಕ್ರೋಢಿಕರಿಸಿರುತ್ತಾರೆ. ಡಾ.ಬಿ.ಆರ್ ಅಂಬೇಡ್ಕರ್ ಅವರು ಕೂಡ ಬೆನಗಲ್ ಅವರ ಶ್ರಮವನ್ನು ಗುರುತಿಸಿದ್ದರು ಎಂದು  ಅಬ್ದುಲ್ ನಝೀರ್ ಹೇಳಿದರು.
     ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ  ವಿಭು ಬಖ್ರು ಮಾತನಾಡಿ, ನ್ಯಾಯಾಲಯಗಳ ಕಟ್ಟಡದೊಂದಿಗೆ  ನ್ಯಾಯವಾದಿಗಳ ಬದ್ಧತೆ, ಹಾಗೂ ಸಿಬ್ಬಂದಿಗಳ ಕರ್ತವ್ಯವು ನ್ಯಾಯ ಒದಗಿಸಲು ಅಗತ್ಯವಾಗಿದೆ ಎಂದು ಹೇಳಿದರು.
    ಪುತ್ತೂರಿನ ನ್ಯಾಯಾಲಯ ಸಂಕೀರ್ಣದಲ್ಲಿ ಒಟ್ಟು 12 ನ್ಯಾಯಾಲಯ ಸಭಾಂಗಣಗಳಿವೆ.  ಆಧುನಿಕ ಶೈಲಿಯಲ್ಲಿ ಕಟ್ಟಡ ನಿರ್ಮಾಣ ಮಾಡಿರುವುದು ಶ್ಲಾಘನೀಯ. ನ್ಯಾಯಾಲಯವು ಸಾಂವಿಧಾನಿಕ ಆಡಳಿತದ ಸಂಕೇತವಾಗಿದೆ ಎಂದು ಹೇಳಿದರು.
   ಆರೋಗ್ಯ ಮತ್ತು  ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಪುತ್ತೂರು ನ್ಯಾಯಾಲಯ ಕಟ್ಟಡ ರಾಜ್ಯದಲ್ಲಿಯೇ ತಾಲೂಕು ಕೇಂದ್ರದಲ್ಲಿರುವ ಅತಿ ದೊಡ್ಡ ಕಟ್ಟಡವಾಗಿದೆ.  ಇಲ್ಲಿನ ಮೂಲ ಸೌಕರ್ಯಗಳಿಗೆ ಸರಕಾರವು ಎಲ್ಲಾ ರೀತಿಯ ಬೆಂಬಲ ನೀಡಲಿದೆ ಎಂದು ಹೇಳಿದರು.
      ಮಂಗಳೂರಿನಲ್ಲಿ 60 ಕೋಟಿ ರೂ. ವೆಚ್ಚದಲ್ಲಿ  ಹೊಸ ನ್ಯಾಯಾಲಯ ಕಟ್ಟಡ ಬ್ಲಾಕ್ ನಿರ್ಮಿಸಲು  ಅನುಮೋದಿಸಲಾಗಿದೆ. ಬೆಳ್ತಂಗಡಿಯಲ್ಲಿ 9 ಕೋಟಿ ರೂ. ಹೊಸ ನ್ಯಾಯಾಲಯ ಕಟ್ಟಡಕ್ಕೆ  ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ಹೇಳಿದರು. ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅಗತ್ಯವಾಗಿದೆÉ ಎಂದು ಅವರು ಹೇಳಿದರು.
      ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಮಂಗಳೂರಿನಲ್ಲಿ ಹೈಕೋರ್ಟ್ ಪೀಠವನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಿದರು.
     ಪುತ್ತೂರು ಶಾಸಕ   ಅಶೋಕ್ ಕುಮಾರ್ ರೈ ಮಾತನಾಡಿ, ಪುತ್ತೂರು ನ್ಯಾಯಾಲಯ ಸಂಕೀರ್ಣಕ್ಕೆ ಎಲ್ಲಾ ಮೂಲ ಸೌಕರ್ಯ ಒದಗಿಸಲು  ಸರಕಾರ ನೆರವು ನೀಡಲಿದೆ. ಪುತ್ತೂರು ಜಿಲ್ಲಾ ನ್ಯಾಯಾಲಯದ ವ್ಯಾಪ್ತಿಗೆ ಬೆಳ್ತಂಗಡಿ ತಾಲೂಕನ್ನು ಸೇರಿಸಬೇಕು ಎಂದು ಹೇಳಿದರು.
      ಕಾರ್ಯಕ್ರಮದಲ್ಲಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್  ಭರತ್ ಕುಮಾರ್, ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಮತ್ತಿತರರು ಉಪಸ್ಥಿತರಿದ್ದರು.  
       ಪ್ರಧಾನ ಜಿಲ್ಲಾ ನ್ಯಾಯಾಧೀಶ ಬಸವರಾಜ ಸ್ವಾಗತಿಸಿದರು.