ಉತ್ತರ ಪ್ರದೇಶ: ಸಂಬಂಧಗಳು ಮೌಲ್ಯ ಕಳೆದುಕೊಳ್ಳುತ್ತಿರುವ ಈ ಕಾಲದಲ್ಲಿ, 10ವರ್ಷದ ಬಾಲಕನೊಬ್ಬ ತನ್ನ ತಾಯಿಯ ಮೃತದೇಹದ ಮುಂದೆ ಗಂಟೆಗಳ ಕಾಲ ಏಕಾಂಗಿಯಾಗಿ ಕುಳಿತಿರುವ ದೃಶ್ಯವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಎಚ್‌ಐವಿ ಮತ್ತು ಕ್ಷಯರೋಗದಿಂದ ಮೃತಪಟ್ಟ ತಾಯಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕರೆದೊಯ್ಯಲು ಸಂಬಂಧಿಕರು, ನೆರೆಹೊರೆಯವರು ಬಾರದಿದ್ದಾಗ, ಈ ಪುಟ್ಟ ಬಾಲಕನೇ ಏಕಾಂಗಿಯಾಗಿ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಶವಾಗಾರಕ್ಕೆ ಬಂದಿದ್ದಾನೆ.
ಎಚ್‌ಐವಿ ಪೀಡಿತ ಮಹಿಳೆ ಬುಧವಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಕಳೆದ ವರ್ಷ ಈ ಬಾಲಕನ ತಂದೆಯೂ ಎಚ್‌ಐವಿಯಿಂದಲೇ ಮೃತಪಟ್ಟಿದ್ದರು. ತಂದೆಗೆ ಎಚ್‌ಐವಿ ಇರುವುದು ತಿಳಿದ ಬಳಿಕ ಊರಿನವರು ಮತ್ತು ಸಂಬಂಧಿಕರು ಈ ಕುಟುಂಬದೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿದ್ದರು. ತಂದೆಯ ಸಾವಿನ ಬಳಿಕ ತಾಯಿ ಅನಾರೋಗ್ಯಕ್ಕೆ ತುತ್ತಾದಾಗ, ಈ 10 ವರ್ಷದ ಬಾಲಕ ಶಾಲೆ ಬಿಟ್ಟು ತಾಯಿಯ ಆರೈಕೆಯಲ್ಲಿ ತೊಡಗಿದ್ದ. "ನಾನೇ ಅಮ್ಮನನ್ನು ನೋಡಿಕೊಳ್ಳುತ್ತಿದ್ದೆ, ನಮ್ಮ ಚಿಕ್ಕಪ್ಪನಿಗೂ ಅಮ್ಮ ಸತ್ತ ವಿಷಯ ತಿಳಿದಿಲ್ಲ" ಎಂದು ಬಾಲಕ ಕಣ್ಣೀರಿಡುತ್ತಾ ಹೇಳಿರುವ ಮಾತುಗಳು ಮನಕಲಕುವಂತಿವೆ.
ಆಸ್ಪತ್ರೆಯ ನೆಲದ ಮೇಲೆ ತಾಯಿಯ ಮೃತದೇಹದ ಪಕ್ಕದಲ್ಲಿ ಬಾಲಕ ಗಂಟೆಗಟ್ಟಲೆ ಕುಳಿತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿಷಯ ತಿಳಿದ ಸ್ಥಳೀಯ ಪೊಲೀಸರು ತಕ್ಷಣ ಆಸ್ಪತ್ರೆಗೆ ಧಾವಿಸಿ, ಬಾಲಕನಿಗೆ ಆಸರೆಯಾಗಿ ನಿಂತು ಶವ ಸಂಸ್ಕಾರದ ವ್ಯವಸ್ಥೆ ಮಾಡಿದ್ದಾರೆ. ಆಸ್ಪತ್ರೆಯಲ್ಲಿದ್ದ ಜನರು ಹೇಳುವಂತೆ, ಪೊಲೀಸರು ಬರುವವರೆಗೂ ಬಾಲಕ ತನ್ನ ತಾಯಿಯ ಶವವನ್ನು ಬಿಟ್ಟು ಎಲ್ಲಿಯೂ ಕದಲಿಲ್ಲ.
ಕೇವಲ ಅನಾಥ ಭಾವವಲ್ಲದೇ, ತನ್ನ ಪ್ರಾಣಕ್ಕೆ ಅಪಾಯವಿದೆ ಎಂಬ ಆತಂಕವನ್ನೂ ಈ ಬಾಲಕ ವ್ಯಕ್ತಪಡಿಸಿದ್ದಾನೆ. ತನ್ನ ಜಮೀನನ್ನು ಕಬಳಿಸಲು ಸಂಬಂಧಿಕರು ಸಂಚು ರೂಪಿಸುತ್ತಿದ್ದಾರೆ ಎಂದು ಮಗು ಆರೋಪಿಸಿದೆ. ತಾಯಿಯ ಅನಾರೋಗ್ಯದ ವಿಷಯ ತಿಳಿದಿದ್ದರೂ ಯಾರೂ ಸಹಾಯಕ್ಕೆ ಬಂದಿರಲಿಲ್ಲ ಎಂದು ಬಾಲಕ ದೂರಿದ್ದಾನೆ.
ಸದ್ಯ 60 ಕಿ.ಮೀ ದೂರದ ಕಸ್‌ಗಂಜ್‌ನಿಂದ ಕೆಲವು ದೂರದ ಸಂಬಂಧಿಕರು ಬಂದ ಬಳಿಕ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ.