ಬಳ್ಳಾರಿ: ಯುವತಿಯೊಬ್ಬಳು ತನಗೆ ಪ್ರಿಯಕರನಿಂದ ಮೋಸವಾಗಿದೆ ಎಂದು ಆರೋಪಿಸಿ ವಿಡಿಯೋ ಮಾಡುತ್ತಾ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಹುಸೇನ್ ನಗರದಲ್ಲಿ ನಡೆದಿದೆ.
ಈ ಕುರಿತು ಮೃತ ಯುವತಿಯ ಅಕ್ಕ ಹೊನ್ನರ್ ಬಿ ಎಂಬವರು ಮಾತನಾಡಿ, "ಮೊಹಮ್ಮದ್ ಶೇಕ್ ಎಂಬಾತ ಆಕೆಗೆ ಆರಂಭದಿಂದಲೂ ಬಹಳ ತೊಂದರೆ ಕೊಟ್ಟಿದ್ದಾನೆ. ಆತನಿಗೆ ಮದುವೆಯಾಗಿದ್ದರೂ ಇವಳೊಂದಿಗೆ ಸಂಬಂಧ ಹೊಂದಿದ್ದ. ಈ ಬಗ್ಗೆ ನಮಗೆ ಹೇಳಿರಲಿಲ್ಲ. ನಾವು ದರ್ಗಾಕ್ಕೆ ಹೋಗಿ ಬಂದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ" ಎಂದು ಹೇಳಿದರು.
"ನಮ್ಮ ತಂಗಿಗೆ ಮುಂಚೆ ಮದುವೆಯಾಗಿತ್ತು. ಆದರೆ ನಂತರ ವಿಚ್ಛೇದನ ಕೊಡಿಸಬೇಕಾಯಿತು. ಇದೀಗ ಮೊಹಮ್ಮದ್ ಶೇಕ್ ಮೋಸ ಮಾಡಿದ್ದಾನೆ. ಆಕೆಯ ಸಾವಿಗೆ ಅವನೇ ಕಾರಣ" ಎಂದು ಆರೋಪಿಸಿದರು.
"ಮೊಹಮ್ಮದ್ ಶೇಖ್‌ಗೆ ಎರಡು ಮಕ್ಕಳಿದ್ದರೂ ನಮ್ಮ ಮಗಳನ್ನು ನಾನೇ ಮದುವೆಯಾಗುತ್ತೇನೆ ಎಂದು ಹೇಳಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಏನೋ ಜಗಳವಾಗಿದೆ. ನಂತರ ಅವರ ತಾಯಿ, ಮಗ ಇವಳಿಗೆ ಹಲ್ಲೆ ಮಾಡಿದ್ದಾರೆ. ಇದಾದ ನಂತರ ಮಗಳು ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ" ಎಂದು ತಿಳಿಸಿದರು.
"ನಮ್ಮ ತಂಗಿ ಯಾವುದೇ ತಪ್ಪು ಮಾಡಿಲ್ಲ. ಮೊಹಮ್ಮದ್ ಶೇಖ್ ಎಂಬಾತ ಈ ಹುಡುಗಿಗೆ ಡಿಸ್ಟರ್ಬ್ ಮಾಡಿದ್ದಾನೆ. ಇವನಿಂದ ಅವಳ ಡಿವೊರ್ಸ್ ಆಯ್ತು. ಅವನ ತಪ್ಪಿನಿಂದಾಗಿ ಇದೀಗ ತಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಾವು ಯಾರ ವಿರುದ್ದವೂ ದೂರು ನೀಡಿಲ್ಲ. ವಿಡಿಯೋದಲ್ಲಿರುವ ಹೇಳಿಕೆಯಂತೆ ಮೂವರ ವಿರುದ್ದ ಪೊಲೀಸರು ಎಫ್ಐಆರ್ ಮಾಡಿದ್ದಾರೆ. ಮೂವರಿಗೂ ಶಿಕ್ಷೆಯಾಗಬೇಕು ಎಂದು ನಮ್ಮ ತಂಗಿ ಹೇಳಿದ್ದಾಳೆ. ಈ ಬಗ್ಗೆ ನಾನು ಇಬ್ಬರಿಗೂ ಬುದ್ದಿ ಹೇಳಿದ್ದೆ. ಏನೋ ಸರಿಹೋಗ್ತಾರೆ ಎಂದು ಸುಮ್ಮನಿದ್ದೆ. ಆದರೆ, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೀಗಾಗಿ, ಅವನಿಗೆ ಶಿಕ್ಷೆಯಾಗಬೇಕು, ನನಗೆ ನ್ಯಾಯ ಬೇಕು" ಎಂದು ಮೃತರ ಅಣ್ಣ ನಿಜಾಮ್ ಒತ್ತಾಯಿಸಿದರು.
ಬಳ್ಳಾರಿಯ ಗಾಂಧಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
