ಈತ ಐಟಿನೂ ಅಲ್ಲ, ಸೋಶಿಯಲ್ ಮೀಡಿಯಾ ಸ್ಟಾರೂ ಅಲ್ಲ: ಆದರೆ ತಿಂಗಳಿಗೆ ಈ ಆಟೋ ಚಾಲಕನ ಆದಾಯ 8ಲಕ್ಷ ರೂ.
Thursday, June 5, 2025
ಇಡೀ ದಿನ ಕೆಲ್ಸ ಮಾಡಿ ದುಡ್ಡು ಗಳಿಸುವುದು ಎಲ್ಲರೂ ಮಾಡುತ್ತಾರೆ. ಆದರೆ ಬುದ್ಧಿವಂತಿಕೆಯಿಂದ, ಯಾವುದೇ ಶ್ರಮವಿಲ್ಲದೆ ಹಣ ಗಳಿಸುವವರು ಇದ್ದೇ ಇದ್ದಾರೆ. ಕೆಲವರ ಸ್ಮಾರ್ಟ್ ಗಳಿಕೆ ಎಲ್ಲರಿಗೂ ಅಚ್ಚರಿ ಮೂಡಿಸುತ್ತದೆ. ಜಗತ್ತಿನಲ್ಲಿ ಹೀಗೂ ಹಣ ಗಳಿಸಬಹುದೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ. ಇದಕ್ಕೆ ಮುಂಬೈನ ಈ ವ್ಯಕ್ತಿ ಸಾಕ್ಷಿ.
ಈತ ಎಂಬಿಎ ಓದಿಲ್ಲ, ಇಂಜಿನಿಯರಿಂಗ್ ಮುಗಿಸಿಲ್ಲ, ಆನ್ಲೈನ್ – ಯೂಟ್ಯೂಬ್ ಎಂದು ಯಾವುದೇ ವೀಡಿಯೋ ಅಪ್ಲೋಡ್ ಮಾಡ್ತಿಲ್ಲ, ಟ್ರಾಫಿಕ್ನಲ್ಲಿ ಡ್ರೈವರ್ ಕೆಲ್ಸ ಮಾಡಿ ಬೆವರಿಳಿಸಿಕೊಳ್ಳೋದಿಲ್ಲ. ಬುದ್ಧಿವಂತಿಕೆಯಿಂದ ಪ್ರತಿದಿನ ಈ ಸಾವಿರಾರು ರೂಪಾಯಿ ಗಳಿಸ್ತಿದ್ದಾನೆ. ಸದ್ಯ ಎಲ್ಲಿ ನೋಡಿದ್ರೂ ಈತನದ್ದೇ ಸುದ್ದಿ. ಆತ ಯಾರು? ಗಳಿಕೆ ಹೇಗೆ? ವಿವರ ಇಲ್ಲಿದೆ.
ಲೆನ್ಸ್ಕಾರ್ಟ್ನ ಪ್ರೊಡಕ್ಟ್ ಲೀಡರ್ ರಾಹುಲ್ ರೂಪಾನಿ ವೀಸಾಕ್ಕಾಗಿ ಮುಂಬೈನಲ್ಲಿರುವ ಯುಎಸ್ ಕಾನ್ಸುಲೇಟ್ಗೆ ಭೇಟಿ ನೀಡಿದ್ದರು. ವೀಸಾ ಆಫೀಸ್ ಒಳಗೆ ಬ್ಯಾಗ್ ತೆಗೆದುಕೊಂಡು ಹೋಗುವಂತಿಲ್ಲ. ಬ್ಯಾಗ್ ಎಲ್ಲಿಡೋದು ಅಂತ ಅವ್ರಿಗೆ ಗೊತ್ತಾಗ್ತಿರಲಿಲ್ಲ. ಅಷ್ಟರಲ್ಲಿ ಒಬ್ಬ ಆಟೋ ಚಾಲಕ, ರೂಪಾನಿ ಅವ್ರನ್ನು ಕರೆದಿದ್ದಾರೆ. ಸರ್, ನಿಮ್ಮ ಬ್ಯಾಗ್ ಕೊಡಿ, ಸೇಫ್ ಆಗಿ ಇಟ್ಟುಕೊಳ್ಳುತ್ತೇ. 1000 ರೂಪಾಯಿ ಚಾರ್ಜ್ ಆಗುತ್ತದೆ ಎಂದಿದ್ದಾರೆ. ಸಾವಿರ ಹೆಚ್ಚು ಎನ್ನಿಸಿದ್ರೂ ರೂಪಾನಿಗೆ ಬೇರೆ ದಾರಿ ಇಲ್ದೆ ಆಟೋ ಚಾಲಕನ ಕೈಗೆ ಬ್ಯಾಗ್ ನೀಡಿ, ಕೆಲ್ಸ ಮುಗಿಸಿ ಬಂದು ಬ್ಯಾಗ್ ಪಡೆದಿದ್ದಾರೆ.
ಇದು ಬರೀ ರೂಪಾನಿ ಮಾತ್ರವಲ್ಲ. ನಾವು - ನೀವು ಯಾರೇ ಹೋದ್ರೂ ಇದೇ ಕೆಲಸ ಮಾಡ್ತೇವೆ. ಬ್ಯಾಗ್ ಸುರಕ್ಷಿತವಾಗಿರಬೇಕು ಎಂದಾಗ, ಅದನ್ನು ಕಾಯ್ದುಕೊಳ್ಳುವವರಿಗೆ ಹಣ ನೀಡುವುದ್ದಕ್ಕೆ ಸಿದ್ಧ ಇರುತ್ತೇವೆ. ಈ ವಿಷಯ ಮುಂಬೈ ಆಟೋ ಚಾಲಕನಿಗೆ ಗೊತ್ತು. ಇದನ್ನೇ ಬ್ಯುಸಿನೆಸ್ ಮಾಡ್ಕೊಂಡು ದಿನಕ್ಕೆ 20 ರಿಂದ 30 ಸಾವಿರ ಗಳಿಸ್ತಾನೆ. ತಿಂಗಳಿಗೆ 5 ರಿಂದ 8 ಲಕ್ಷ ರೂ. ಸಂಪಾದನೆ ಕುಳಿತಲ್ಲೇ ಆಗ್ತಿದೆ.
ರೂಪಾನಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಆಟೋ ಚಾಲಕನ ಬಗ್ಗೆ ಮಾಹಿತಿ ನೀಡಿದ್ದಾರೆ. ರೂಪಾನಿ ಪ್ರಕಾರ, ಆಟೋ ಚಾಲಕ ಪ್ರತಿದಿನ ಯುಎಸ್ ಕಾನ್ಸುಲೇಟ್ ಹೊರಗೆ ನಿಲ್ಲುತ್ತಾನೆ. ಪ್ರತಿದಿನ 20 ರಿಂದ 30 ಮಂದಿ ತಮ್ಮ ಬ್ಯಾಗ್ಗಳನ್ನು ಅವನಿಗೆ ಹಸ್ತಾಂತರಿಸುತ್ತಾರೆ. ಪ್ರತಿ ಬ್ಯಾಗ್ಗೆ 1000 ರೂ. ವಸೂಲಿ ಮಾಡಿದರೆ ದಿನಕ್ಕೆ 20,000 ರಿಂದ 30,000 ರೂ. ಆಗುತ್ತದೆ. ಹಾಗಂತ ಬ್ಯಾಗ್ ಸುರಕ್ಷಿತ. ಯಾವುದೇ ಮೋಸ ಇಲ್ಲ. ರಾಹುಲ್ ಪ್ರಕಾರ, ಚಾಲಕ ಸ್ಥಳೀಯ ಪೊಲೀಸ್ ಅಧಿಕಾರಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾನೆ. ಬ್ಯಾಗ್ಗಳನ್ನು ಹತ್ತಿರದ ಲಾಕರ್ನಲ್ಲಿ ಇಡ್ತಾನೆ. ಇಲ್ಲವೇ ತನ್ನ ಆಟೋದಲ್ಲಿಯೇ ಇಟ್ಟುಕೊಳ್ತಾನೆ. ಈ ಆಟೋ ಚಾಲನೆಗಲ್ಲ, ಲಾಕರ್ ರೀತಿ ಬಳಕೆ ಆಗುತ್ತಿದೆ.
ಈ ಆಟೋ ಚಾಲಕನಿಗೆ ಪದವಿ ಇಲ್ಲ, ಕಚೇರಿ ಇಲ್ಲ. ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳುವ ಕಲೆ ಮತ್ತು ನಂಬಿಕೆ ಹುಟ್ಟಿಸುವ ಶಕ್ತಿ ಇದೆ. ಇದು ಉದ್ಯಮಶೀಲತೆ ಎಂದು ರೂಪಾನಿ ಬರೆದಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆದಾರರು ಈ ಪೋಸ್ಟ್ ಗೆ ಕಮೆಂಟ್ ಸುರಿಮಳೆಗೈದಿದ್ದಾರೆ. ಸಾವಿರ ರೂಪಾಯಿ ಜಾಸ್ತಿ ಆಯ್ತೆಂದು ಕೆಲವರು ಹೇಳಿದ್ರೂ, ಆ ಪರಿಸ್ಥಿತಿಯಲ್ಲಿ ನಮಗೆ ಬ್ಯಾಗ್ ಮುಖ್ಯವಾಗುತ್ತೆ. ಹಾಗಾಗಿ 1000 ರೂ. ನೀಡಲು ನಾವು ಸಿದ್ಧರಾಗ್ತೇವೆ ಎಂದು ಮತ್ತೊಬ್ಬರು ಬರೆದಿದ್ದಾರೆ. ಯುಎಸ್ ಕಾನ್ಸುಲೇಟ್ ಒಳಗೆ ಬ್ಯಾಗ್ ಪ್ರವೇಶವಿಲ್ಲ. ಕಚೇರಿ ಮುಂದೆ ಆಟೋ ಚಾಲಕನನ್ನು ನಾವು ನೋಡಿದ್ದೇವೆ ಎಂದು ಕೆಲವರು ರೂಪಾನಿ ಪೋಸ್ಟ್ ಸಮರ್ಥಿಸಿಕೊಂಡಿದ್ರೆ ಮತ್ತೆ ಕೆಲವರು ಚಾಲಕನ ಗಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.