ತಾಯಿಗೆ 'ಬೈ ಅಮ್ಮ' ಎಂದ ಕ್ಷಣಗಳಲ್ಲೇ ದಾರುಣ ಸಾವು; ಗುಂಟೂರು ಬಳಿ ಸಂಭವಿಸಿದ ದುರಂತದಲ್ಲಿ ನಾಲ್ವರಿಗೆ ಗಂಭೀರ ಗಾಯ!
ಗುಂಟೂರು ಗ್ರಾಮೀಣ (ಆಂಧ್ರಪ್ರದೇಶ):
ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೊರಟಿದ್ದ ಆಂಧ್ರಪ್ರದೇಶದ ವಿಜಯವಾಡ ಸಂಚಾರ ವಿಭಾಗದ ಡಿಸಿಪಿ ಶಿರೀನ್ ಬೇಗಂ ಅವರ ಪುತ್ರಿ ಶೇಖ್ ಆಸಿಫಾ (24) ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ರವಿವಾರ ಸಂಭವಿಸಿದೆ.
ಗುಂಟೂರು ನಗರದ ಹೊರವಲಯದ ಎಟುಕೂರು ಸಮೀಪ ಈ ದುರಂತ ನಡೆದಿದ್ದು, ಕಾರಿನಲ್ಲಿದ್ದ ಇತರ ನಾಲ್ವರು ಸ್ನೇಹಿತರು ತೀವ್ರವಾಗಿ ಗಾಯಗೊಂಡಿದ್ದಾರೆ.
ಲಾರಿ ಚಾಲಕ ದಿಢೀರ್ ಬ್ರೇಕ್ ಹಚ್ಚಿದ್ದೇ ದುರಂತಕ್ಕೆ ಕಾರಣ!
ರವಿವಾರ ಬೆಳಿಗ್ಗೆ ಶೇಖ್ ಆಸಿಫಾ ತಮ್ಮ ಸ್ನೇಹಿತರಾದ ಜಿಮ್ ಮಾಲೀಕ ಉಂಡಿ ರುತ್ವಿಕ್, ಅವಿನಾಶ್, ಸುಧೀರ್ ಹಾಗೂ ವಂಶಿ ಅವರೊಂದಿಗೆ ಚಿರಾಲ ಬೀಚ್ಗೆ ಕಾರಿನಲ್ಲಿ ಹೊರಟಿದ್ದರು. ಕಾರು ಎಟುಕೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ, ಮುಂಭಾಗದಲ್ಲಿದ್ದ ಲಾರಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ.
ಈ ವೇಳೆ ವೇಗವಾಗಿ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಲಾರಿಯ ಹಿಂಭಾಗಕ್ಕೆ ಪ್ರಬಲವಾಗಿ ಡಿಕ್ಕಿ ಹೊಡೆದು, ಬಳಿಕ ರಸ್ತೆಬದಿಯ ಡಿವೈಡರ್ಗೆ ಅಪ್ಪಳಿಸಿದೆ. ಅಪಘಾತದ ರಭಸಕ್ಕೆ ಕಾರಿನ ಏರ್ಬ್ಯಾಗ್ಗಳು ತೆರೆದುಕೊಂಡಿದ್ದರೂ, ಹಿಂಭಾಗದ ಸೀಟಿನಲ್ಲಿ ಕುಳಿತಿದ್ದ ಆಸಿಫಾ ಅವರ ತಲೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
‘ಬೈ ಅಮ್ಮ’ ಎಂದಿದ್ದೇ ಕೊನೆಯ ಮಾತು!
ರವಿವಾರ ಬೆಳಿಗ್ಗೆಯಷ್ಟೇ ಡಿಸಿಪಿ ಶಿರೀನ್ ಬೇಗಂ ಅವರು ಕರ್ತವ್ಯ ನಿಮಿತ್ತ ಅಂಬೇಡ್ಕರ್ ಕಲಾವೇದಿಕೆಗೆ ಆಗಮಿಸಿದ್ದರು. ಅಲ್ಲಿಗೆ ಬಂದಿದ್ದ ಮಗಳು ಆಸಿಫಾ, ತಾಯಿಯನ್ನು ಅಪ್ಪಿಕೊಂಡು 'ಬೈ ಅಮ್ಮ' ಎಂದು ಹೇಳಿ ಬೀಚ್ಗೆ ತೆರಳಿದ್ದಳು. ಶಿರೀನ್ ಬೇಗಂ ಕೂಡ ಮಗಳಿಗೆ 'ಜಾಗ್ರತೆ' ಎಂದು ಕಳುಹಿಸಿಕೊಟ್ಟಿದ್ದರು. ಆದರೆ, ಅದಾಗಿ ಕೇವಲ ಒಂದು ಗಂಟೆಯಲ್ಲೇ ಮಗಳು ಅಪಘಾತದಲ್ಲಿ ಮೃತಪಟ್ಟ ಸುದ್ದಿ ಕೇಳಿ ತಾಯಿ ಆಸ್ಪತ್ರೆಯಲ್ಲೇ ಕುಸಿದುಬಿದ್ದಿದ್ದಾರೆ.
ಲಾರಿ ವಶಕ್ಕೆ – ಪ್ರಕರಣ ದಾಖಲು:
ಹೆದ್ದಾರಿ ಗಸ್ತು ಸಿಬ್ಬಂದಿ ಗಾಯಾಳುಗಳನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದ ಸ್ಥಳ ಪರಿಶೀಲಿಸಿರುವ ನಲ್ಲಪಾಡು ಠಾಣೆಯ ಪೊಲೀಸರು, ಘಟನೆಗೆ ಕಾರಣವಾದ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರು ಚಲಾಯಿಸುತ್ತಿದ್ದ ರುತ್ವಿಕ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
